ಖಾಸಗೀಕರಣಕ್ಕೆ ಚುರುಕು, ಸದ್ಯಕ್ಕೆ ಏರ್ ಇಂಡಿಯಾ ಖಾಸಗೀಕರಣ ಇಲ್ಲ

ಸಾಂದರ್ಭಿಕ ಚಿತ್ರ- ಏರ್ ಇಂಡಿಯಾ
ಸಾಂದರ್ಭಿಕ ಚಿತ್ರ- ಏರ್ ಇಂಡಿಯಾ

ನವದೆಹಲಿ: ವಿತ್ತೀಯ ಕೊರತೆ ನೀಗಿಸಲು ಹರಸಾಹಸ ಪಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಜೆಟ್ ಘೋಷಣೆಯಂತೆ ಖಾಸಗೀಕರಣ ಪ್ರಕ್ರಿಯೆಗೆ ಚುರುಕು ನೀಡಲು ಮುಂದಾಗಿದೆ.

ಸದ್ಯಕ್ಕೆ ಏರ್ ಇಂಡಿಯಾದ ಖಾಸಗೀಕರಣ ಇಲ್ಲ ಎಂದು ಹೇಳುತ್ತಲೇ ಭವಿಷ್ಯದಲ್ಲಿ ಇಂಥ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದೆ. ಈ ಮೂಲಕ ಏರ್‌ಇಂಡಿಯಾದಲ್ಲಿ ಸರ್ಕಾರ ಹೊಂದಿರುವ ಪಾಲು ಮಾರಾಟ ಭವಿಷ್ಯದಲ್ಲಿ ನಡೆಯುವುದಂತು ಖಚಿತ ಎಂಬ ಸೂಚನೆ ನೀಡಿದೆ.

ನಷ್ಟದಲ್ಲಿರುವ ಏರ್ ಇಂಡಿಯಾದ ಷೇರುಗಳನ್ನು ಮಾರಾಟ ಮಾಡಬೇಕು ಎನ್ನುವ ಕುರಿತ ಬೇಡಿಕೆ ಹಿಂದಿ ನಿಂದಲೂ ಇದೆ. ಸದ್ಯ ಏರ್‌ಇಂಡಿಯಾ ಭವಿಷ್ಯದ ಹಾದಿ ಹೇಗಿರಬೇಕು ಎನ್ನುವುದಕ್ಕೆ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ದೇಶದ ರಾಷ್ಟ್ರೀಯ ವಿಮಾನ ಸಂಸ್ಥೆ ಲಾಭದ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳುವ ತುರ್ತು ಅಗತ್ಯವಿದೆ. ವೆಚ್ಚ ಮತ್ತು ದಕ್ಷತೆಯಲ್ಲಿ ಸ್ಪರ್ಧಾತ್ಮಕತೆ ತರುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಾಪತಿ ರಾಜು ಹೇಳಿದ್ದಾರೆ.

ಇದೇ ವೇಳೆ, ಅವರು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕಾಪ್ಟರ್ ಸೇವೆ ಒದಗಿಸುವ ಪವನ್ ಹಂಸ ಕಂಪನಿಯನ್ನು ಷೇರುಪೇಟೆಗೆ ಎಳೆತರುವ ನಿರ್ಧಾರ ಘೋಷಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಕಾಯ್ದುಕೊಳ್ಳಲು ಈ ರೀತಿಯ ಕ್ರಮ ಅನಿವಾರ್ಯ. ಈ ಸಂಬಂಧ ನಾಗರಿಕ ವಿಮಾನಯಾನ ನೀತಿಯಲ್ಲೂ ಅಗತ್ ಬದಲಾವಣೆ ತರಲಾಗಿದೆ ಎಂದು ರಾಜು ತಿಳಿಸಿದ್ದಾರೆ. ಈ ಎರಡೂ ಕಂಪನಿಗಳು ಮುಂದಿನ ಆರು ತಿಂಗಳೊಳಗೆ ಷೇರುಮಾರುಕಟ್ಟೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲಿವೆ.

ವಿಮಾನ ನಿಲ್ದಾಣ ಪ್ರಾಧಿಕಾರ ಮಿನಿರತ್ನ ಕಂಪನಿಯಾಗಿದ್ದು, ದೇಶದಲ್ಲಿ 11 ಅಂತಾರಾಷ್ಟ್ರೀಯ ಸೇರಿ 125 ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತಿದೆ. ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ನಾಗ್ಪುರದಲ್ಲಿ ನಿಲ್ದಾಣಗಳ ಮೇಲ್ದರ್ಜೆಗೆ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿದೆ. ಇನ್ನು ಪವನ್ ಹಂಸ ಏಷ್ಯಾದ ಅತಿ ದೊಡ್ಡ ಕಾಪ್ಟರ್ ಕಂಪನಿಯಾಗಿದೆ. ಇದು ಒಟ್ಟು 47 ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com