
ಬೆಂಗಳೂರು: ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರನ ವಿರುದ್ಧದ ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ಸಂಬಂಧ 2010ರಲ್ಲಿ ದಾಖಲಾಗಿದ್ದ ಎಫ್ಐಆರ್ ನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೋಮವಾರ ಬಿಡುಗಡೆಗೊಳಿಸಿದ್ದಾರೆ.
ಮಹಾದೇವಪ್ಪ ಅವರ ಪುತ್ರ ಸುನಾಲ್ ಬೋಸ್ ಅವರ ವಿರುದ್ಧ ಲೋಕಾಯುಕ್ತದಲ್ಲಿ ಆರ್.ಬಸವರಾಜ್ ಎಂಬುವರು ದೂರು ಸಲ್ಲಿಸಿದ್ದರು. ಮೈಸೂರು ವಿಭಾಗದ ಭೂ ವಿಜ್ಞಾನಿ ಅಲ್ಫಾನ್ಸಿಸ್ ಎಂಬುವರು ಮಹಾದೇವಪ್ಪ ಅವರ ಪುತ್ರನಿಗೆ ಹಣ ನೀಡಬೇಕೆಂದು ಹೇಳಿ 1 ಲಕ್ಷ ಲಂಚ ಕೇಳಿದ್ದರು. ಈ ಪ್ರಕರಣದಲ್ಲಿ ಸುನೀಲ್ ಬೋಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು ಎಂದು ಆಪಾದಿಸಿದ್ದಾರೆ.
ನಂತರ ಈ ಪ್ರಕರಣ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂಬ ಈಶ್ವರಪ್ಪ, ಇದರ ಆಧಾರದ ಮೇಲೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಮಹಾದೇವಪ್ಪ ಅವರು ಶಂಕಿತರು ಎಂದು ಆರೋಪಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ರಾಜ್ಯದ ಎಲ್ಲ ಭಾಗಗಳಿಗೂ ಸರಿಯಾಗಿ ಮರಳಳು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಮಾನನಷ್ಟ ಮೊಕದ್ದಮೆ
ಕೆ.ಎಸ್.ಈಶ್ವರಪ್ಪ ಅವರು ನಮಗೆ ಕೆಟ್ಟ ಹೆಸರು ತರಲು, ದುರುದ್ಧೇಶಪೂರ್ವಕವಾಗಿ ತಪ್ಪುಮಾಹಿತಿ ನೀಡಿ ನಮ್ಮ ಕುಟುಂಬದ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ.
ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಲೋಕೋಪಯೋಗಿ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ನನ್ನ ಮಗ ಸುನೀಲ್ ಬೋಸ್ ಮರಳು ಅಕ್ರಮದಲ್ಲ್ಲಿ ಭಾಗಿಯಾಗಿದ್ದಾನೆ, ಲೋಕಾಯುಕ್ತ ತನಿಖೆಯಾಗಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ನನ್ನ ಮಗನನ್ನು ಪ್ರಕರಣದಿಂದ ಕೈ ಬಿಡಲಾಗಿದೆ. ಇದನ್ನು ವಿಧಾನಪರಿಷತ್ನಲ್ಲೂ ಈಶ್ವರಪ್ಪ ಅವರಿಗೆ ತಿಳಿಸಿ ದಾಖಲೆ ನೀಡಿದ್ದೇನೆ. ಆದರೂ ದುರುದ್ದೇಶದಿಂದ ಆಪಾದನೆ ಮಾಡುತ್ತಿದ್ದಾರೆ ಎಂದಿದ್ದಾರೆ.
Advertisement