
ಛತ್ತೀಸ್‌ಗಡ: ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಶಸ್ತ್ರಕ್ರಿಯೆ ಮಾಡಿದ್ದ ಅಲ್ಲಿನ ವೈದ್ಯರು ತುಕ್ಕು ಹಿಡಿದ ಉಪಕರಣಗಳನ್ನು ಬಳಸಿದ್ದರು ಎಂಬ ವಿಷಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮಹಿಳೆಯರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ಪ್ರಕರಣಕ್ಕೆ ವೈದ್ಯರು ಬಳಸಿರುವ ಔಷಧಿ ಹಾಗೂ ತುಕ್ಕು ಹಿಡಿದ ಉಪಕರಣಗಳೇ ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿ ಸಿದ್ಧಾರ್ಥ್ ಕೋಮಲ್ ಸಿಂಗ್ ಹೇಳಿದ್ದಾರೆ.
ಜನಸಂಖ್ಯಾ ಸ್ಫೋಟ ನಿಯಂತ್ರಿಸುವ ಸಲುವಾಗಿ ಬಿಲಾಸ್ ಪುರದಲ್ಲಿ ಛತ್ತೀಸ್‌ಘಡದ ಸರ್ಕಾರ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಿತ್ತು. ಶಿಬಿರದಲ್ಲಿ ಡಾ.ಆರ್.ಕೆ. ಗುಪ್ತಾ ಸೇರಿದಂತೆ ಅವರ ಇಬ್ಬರು ಸಹಾಯಕ ಸಿಬ್ಬಂದಿಗಳು ಸೇರಿ ಕೇವಲ ಕೆಲವು ಘಂಟೆಗಳಲ್ಲಿ ಸುಮಾರು 80 ಮಹಿಳೆಯರಿಗೆ ಸಂತಾನಹರಣ ಶಸ್ತ್ರಕ್ರಿಯೆ ನಡೆಸಿದ್ದರು. ಶಸ್ತ್ರಚಿಕಿತ್ಸೆ ನಂತರ 11 ಮಂದಿ ಮಹಿಳೆಯರು ಸಾವನ್ನಪ್ಪಿದ್ದರಲ್ಲದೇ 49 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 20 ಮಹಿಳೆಯರ ಸ್ಥಿತಿ ಇಂದಿಗೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
Advertisement