
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ 7 ಮಂದಿ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದೆ.
ಪ್ರಕರಣದ 13 ಆರೋಪಿಗಳ ಪೈಕಿ 7 ಆರೋಪಿಗಳ ಹೆಸರನ್ನು ಇಂದು ಸುಪ್ರೀಂಕೋರ್ಟ್ ಬಹಿರಂಗಪಡಿಸಿದ್ದು, ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸ್ ಹಾಗೂ ಅಳಿಯ ಗುರುನಾಥ್ ಮೇಯಪ್ಪನ್, ಆಟಗಾರ ಸ್ಟುವರ್ಟ್ ಬಿನ್ನಿ, ರಾಜಸ್ಥಾನ ರಾಯಲ್ಸ್‌ನ ಮುಖ್ಯಸ್ಥ ರಾಜ್ ಕುಂದ್ರಾ, ಸುಂದರ್ ರಾಮನ್, ಒವೆಸ್ ಶಾ, ಸ್ಯಾಮ್ಯುಯೆಲ್ ಬದ್ರಿ ಹೆಸರುಗಳನ್ನು ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ಸಮಿತಿಯ ವರದಿಯಲ್ಲಿದೆ.
ನ್ಯಾ. ಮುದ್ಗಲ್ ಸಮಿತಿ ಸಲ್ಲಿಸಿದ್ದ ಅಂತಿಮ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಇಂದು ಆರೋಪಿಗಳ ಹೆಸರನ್ನು ಬಿಡುಗಡೆ ಮಾಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ.
ಐಪಿಎಲ್ 6ನೇ ಆವೃತ್ತಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮುದ್ಗಲ್ ನೇತೃತ್ವ ಸಮಿತಿಯನ್ನು ರಚಿಸಿತ್ತು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಮಿತಿ ಮುಚ್ಚಿದ ಲಕೋಟೆಯಲ್ಲಿ ತನ್ನ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್‌ಗೆ ನವೆಂಬರ್ 3ರಂದು ಸಲ್ಲಿಸಿತ್ತು.
Advertisement