ಧರ್ಮ-ಉಗ್ರವಾದ ಪರಸ್ಪರ ಬೆಸೆಯಬೇಡಿ

ಇಂದು ಇಡೀ ವಿಶ್ವ ಭಯೋತ್ಪಾದನೆ ಮತ್ತು...
ಮ್ಯಾನ್ಮಾರ್ ನ ನ್ಯಾಪೀತಾದಲ್ಲಿ ನರೇಂದ್ರ ಮೋದಿ
ಮ್ಯಾನ್ಮಾರ್ ನ ನ್ಯಾಪೀತಾದಲ್ಲಿ ನರೇಂದ್ರ ಮೋದಿ
Updated on

ನ್ಯಾಪೀತಾ: ಇಂದು ಇಡೀ ವಿಶ್ವ ಭಯೋತ್ಪಾದನೆ ಮತ್ತು ತೀವ್ರವಾದದ ಸವಾಲು ಎದುರಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಧರ್ಮ ಮತ್ತು ಭಯೋತ್ಪಾದನೆಯನ್ನು ಪರಸ್ಪರ ಬೆಸೆಯುವುದನ್ನು ವಿಶ್ವಸಮುದಾಯ ತಿರಸ್ಕರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮ್ಯಾನ್ಮಾರ್ ರಾಜಧಾನಿಯಲ್ಲಿ ಬುಧವಾರ ಪೂರ್ಣ ಏಷ್ಯಾ ಶೃಂಗದಲ್ಲಿ ಬುಧವಾರ ಮಾತನಾಡಿದ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟ ತೋರಿಕೆಗೆ ಸೀಮಿತವಾಗಬಾರದು ಎನ್ನುವ ಸಂದೇಶವನ್ನೂ ಜಗತ್ತಿಗೆ ಸಾರಿದರು. ಇಸಿಸ್ ವಿರುದ್ಧ ಪೂರ್ವ ಏಷ್ಯಾ ಶೃಂಗದಲ್ಲಿ ತೆಗೆದುಕೊಳ್ಳಾಲಾದ ಫೋಷಣೆಯನ್ನು ನಾವು ಬೆಂಬಲಿಸುತ್ತೇವೆ ಎಂದ ಮೋದಿ, ಎಲ್ಲ ರೀತಿಯ ಭಯೋತ್ಪಾದನೆ ವಿರುದ್ಧ ನೈಜವಾದ ಅಂತಾರಾಷ್ಟ್ರೀಯ ಸಹಭಾಗಿತ್ವವೊಂದರ ಅಗತ್ಯವಿದೆ.

ಮಾನವತ್ವದ ಮೇಲೆ ನಂಬಿಕೆ ಇಟ್ಟಿರುವವರು ಈ ನಿಟ್ಟಿನಲ್ಲಿ ಒಂದಾಗಬೇಕು. ಧರ್ಮ ಮತ್ತು ಭಯೋತ್ಪಾದನೆಯನ್ನು ಪರಸ್ಪರ ಬೆಸೆಯುವುದನ್ನು ಬಿಡಬೇಕು.
ಭಯೋತ್ಪಾದನೆ ಮತ್ತು ತೀವ್ರವಾದದ ಸವಾಲು ಹಿಂದೆಂದಿಗಿಂತಲೂ ಹೆಚ್ಚಿದೆ. ಮಾದಕ ವಸ್ತು, ಶಸ್ತ್ರಾಸ್ತ್ರ ಸಾಗಣೆ ಮತ್ತು ಖೋಟಾ ನೋಟು ವ್ಯವಹಾರಗಳ ನಡುವೆ ಹತ್ತಿರದ ಸಂಬಂಧ ಇದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಸೈಬರ್ ಮತ್ತು ಆಂತರಿಕ್ಷ ಕ್ಷೇತ್ರವನ್ನು ಸಂಪರ್ಕ ಹಾಗೂ ಸಮೃದ್ಧಿಯ ಮೂಲವಾಗಿ ಪರಿಗಣಿಸ ಬೇಕೇ ಹೊರತು ಸಂಘರ್ಷದ ಹೊಸ ಆತಂಕವಾಗಿ ಅಲ್ಲ ಎಂದೂ ಮೋದಿ ಕಿವಿ ಮಾತು ಹೇಳಿದ್ದಾರೆ.

ಮೋದಿ ಕಾರ್ಯಕ್ರಮಕ್ಕೆ 500 ಸಿಇಒಗಳು

18ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಮೋದಿ ಅವರಿಗಾಗಿ ಆಯೋಜಿಸಲಾಗುವ ಅದ್ದೂರಿ ಔತಣಕೂಟ ಸಾಕಷ್ಟು ಕಾರಣಗಳಿಂದ ಸುದ್ದಿ ಮಾಡಲಿದೆ. ಭಾರತದ ಪ್ರಧಾನಿಯೊಬ್ಬರಿಗೆ ಈ ರೀತಿಯ ಅದ್ದೂರಿ ಸ್ವಾಗತ ಆಸ್ಟ್ರೇಲಿಯಾದಲ್ಲಿ ಸಿಗುತ್ತಿರುವುದು ಇದೇ ಮೊದಲಾದರೆ ಇನ್ನೊಂದು ಕಡೆ ಈ ಕಾರ್ಯಕ್ರಮದಲ್ಲಿ ಮೋದಿ ಅವರು ಮಾಡಲಿರುವ ಭಾಷಣವನ್ನು ಆಲಿಸಲು ಆಸ್ಟ್ರೇಲಿಯಾದ ಪ್ರಮುಖ 500 ಕಂಪನಿಗಳ ಸಿಇಒಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆಗಮಿಸಲಿದ್ದಾರೆ. ಭಾರತೀಯ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾಗೆ ಭೇಟಿಕೊಡುತ್ತಿರುವುದು 28 ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ ರಾಜೀವ್ ಗಾಂಧಿ ಕೊನೆಯ ಭಾರಿ ಭೇಟಿ ನೀಡಿದ್ದರು. ಹಾಗಾಗಿ ಮೋದಿ ಅವರ ಭೇಟಿಗೆ ಸಾಕಷ್ಟು ಮಹತ್ವ ಸಿಕ್ಕಿದೆ. ಮೋದಿ ಅವರು ಗುರುವಾರ ಸಂಜೆಯೇ ಸಿಡ್ನಿಗೆ ತಲುಪಿದ್ದು, ಅಲ್ಲಿ ನಡೆಯಲಿರುವ ಜ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿ-ಲಿ ಕೆಕಿಯಾಂಗ್ ಭೇಟಿ

ಶೃಂಗದ ಹಿನ್ನೆಲೆಯಲ್ಲಿ ಮೋದಿ ಹಾಗೂ ಚೀನಾ ಪ್ರಧಾನಿ ಕೆಕಿಯಾಂಗ್ ಅವರನ್ನೂ ಭೇಟಿಯಾದರು. ಈ ವೇಳೆ ಭಾರತ ಭೇಟಿ ಕುರಿತು ಅಧ್ಯಕ್ಷ ಕ್ಸಿಜಿನ್ಪಿಂಗ್ ವ್ಯಕ್ತಪಡಿಸಿದ್ದ ಖುಷಿಯನ್ನು ಕೆಕಿಯಾಂಗ್ ಅವರು ಮೋದಿ ಜತೆ ಹಂಚಿಕೊಂಡರು. ಕ್ಸಿನ್ಪಿಂಗ್ ಹಾಗೂ ಮೋದಿ ಆಸ್ಟ್ರೇಲಿಯಾದಲ್ಲಿ ಭೇಟಿ ಮಾಡಲಿದ್ದಾರೆ.

ರಷ್ಯಾ ಪ್ರಧಾನಿ ಮೋದಿ ಚರ್ಚೆ
ಆಸಿಯಾನ್ ಮತ್ತು ಈಸ್ಟ್ ಏಷ್ಯಾ ಶೃಂಗದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ರಷ್ಯಾ ಪ್ರಧಾನಿ ಡಮಿಟ್ರಿ ಮಡ್ವೆಡೆವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರು ಎರಡೂ ದೇಶಗಳ ನಡುವಿನ ಬೇಧವ್ಯವನ್ನು ಮತ್ತಷ್ಟು ಬಲಪಡಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ. ನಂತರ ಮಾತನಾಡಿದ ಡಮಿಟ್ರಿ ಅವರು, ಭಾರತ ನಮ್ಮ ಆತ್ಮೀಯ ಮತ್ತು ಮೌಲ್ಯಯುತ ಗೆಳೆಯ ಎಂದಿದ್ದಾರೆ. ಮುಂದಿನ ತಿಂಗಳು ದೆಹಲಿಯಲ್ಲಿ 15ನೇ ಭಾರತ-ರಷ್ಯಾ ಶೃಂಗ ನಡೆಯಲಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವಪಡೆದಿದೆ. ಶೃಂಗದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com