ಮೋದಿ ನಿಂದಿಸಿದ ಸಿಎಂ ಸಿದ್ದು

ಕೆಪಿಸಿಸಿ ಕಚೇರಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ...
ಜವಾಹರ್‌ಲಾಲ್ ನೆಹರೂ 125ನೇ ಜನ್ಮದಿನಾಚರಣೆಯಲ್ಲಿ  ಸಿಎಂ ಸಿದ್ದರಾಮಯ್ಯ
ಜವಾಹರ್‌ಲಾಲ್ ನೆಹರೂ 125ನೇ ಜನ್ಮದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕೆಪಿಸಿಸಿ ಕಚೇರಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವೇದಿಕೆಯಾಗಿ ಪರಿಣಮಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಪ್ರಧಾನಿ ದಿ.ಜವಾಹರ್‌ಲಾಲ್ ನೆಹರೂ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ನೆಹರೂ ಅವರ ನಕಲು ಮಾಡುತ್ತಿದ್ದು, ಬಿಜೆಪಿಯವರು ಜಾತಿ-ಧರ್ಮದ ಹೆಸರಿನಲ್ಲಿ ದೇಶವನ್ನು ಇಬ್ಬಾಗ ಮಾಡುತ್ತಿದ್ದಾರೆ, ಇಂಥ ಶಕ್ತಿಗಳನ್ನು ತಡೆಯಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿಯವರು ನಾನು ಈ ದೇಶದ ಪ್ರಧಾನಿಯಲ್ಲ, ಪ್ರಧಾನ ಸೇವಕ ಎಂದು ಭಾಷಣ ಮಾಡಿದ್ದಾರೆ. ಆದರೆ ಅವರು ಇತಿಹಾಸವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯವರು 60 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಇವರು ಮೊದಲು ದೇಶದ ಇತಿಹಾಸವನ್ನು ಓದಲಿ, ನೆಹರೂ ಈ ದೇಶದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಡಿಪಾಯ ಹಾಕಿದರು. ಜಾತ್ಯತೀತ ರಾಷ್ಟ್ರವನ್ನು ಕಟ್ಟುವುದು ಅವರ ಕನಸಾಗಿತ್ತು. ಕೈಗಾರಿಕಾ ಕ್ರಾಂತಿಯ ಮೂಲಕ ಆ ಕಾಲದಲ್ಲೇ ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸುವುದಕ್ಕೆ ಕಾರಣರಾದರು. ಎಲ್ಲದಕ್ಕಿಂತ ಮುಖ್ಯವಾಗಿ ಪಂಚವಾರ್ಷಿಕ ಯೋಜನೆ ಮೂಲಕ ದೇಶದ ಬೆಳವಣಿಗೆಗೆ ಹೊಸ ದಿಕ್ಕು ನೀಡಿದರು.

ಆದರೆ ಮೋದಿ ಪಂಚವಾರ್ಷಿಕ ಯೋಜನೆಯನ್ನೇ ನಿಲ್ಲಿಸಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜೈಲಿನಲ್ಲಿದ್ದಾಗ ನೆಹರೂ ಅವರು ತಮ್ಮ ಪುತ್ರಿ ಇಂದಿರಾ ಅವರಿಗೆ 30 ಪತ್ರಗಳನ್ನು ಬರೆದಿದ್ದರು. ಅದು ತಂದೆ-ಮಗಳ ಸಹಜ ಯೋಗಕ್ಷೇವು ವಿಚಾರಣೆಯಾಗಿರದೇ ದೇಶದ ಬಗ್ಗೆ ಅವರಿಬ್ಬರು ಹೊಂದಿದ್ದ ಕಾಳಜಿಯನ್ನು ತೋರಿಸುತ್ತದೆ. ಅವರ ಡಿಸ್ಕವರಿ ಆಫ್ ಇಂಡಿಯಾ ಗ್ರಂಥ ದೇಶದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತದೆ. ಕೆಪಿಸಿಸಿ ಪತಿಯಿಂದ ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಯುವಕರಿಗೆ ವಿತರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅಂಡೆಪಿಂಡಗಳು; ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಬಿಜೆಪಿಯವರು ಅಂಡೆಪಿಂಡಗಳು, ಹುಚ್ಚನ ಕೈಗೆ ಕತ್ತಿಕೊಟ್ಟು ಗಡ್ಡ ಕೆರೆಸಿಕೊಳ್ಳುವ ಸ್ಥಿತಿ ಈಗ ದೇಶದಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಕೋಮುದಳ್ಳುರಿ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಗೃಹ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಐಟಿಬಿಟಿ ಸಚಿವ ಡಾ.ಎಸ್.ಆರ್.ಪಾಟೀಲ್, ವೀರಣ್ಣ ಮತ್ತೀಕಟ್ಟಿ, ಎಸ್.ಟಿ.ಸೋಮಶೇಖರ್ ಇದ್ದರು.

ಕ್ರಿಮಿನಲ್‌ಗಳು: ಪರಮ್
ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ಗೌರವ ಇಲ್ಲ. ಅವರ ಸಂಪುಟದಲ್ಲಿ ಕ್ರಿಮಿನಲ್‌ಗಳು, ವಜ್ರ ವ್ಯಾಪಾರಿಗಳು, ಕಾರ್ಪೊರೇಟ್ ಜಗತ್ತಿನವರು ತುಂಬಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಇದ್ದಾಗಲೆಲ್ಲ ದಲಿತರು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ಇತ್ತು. ಯುಪಿಎ ಸರ್ಕಾರದಲ್ಲಿ ದಲಿತ ಸಮುದಾಯಕ್ಕೆ ಸೇರಿದ 10ಕ್ಕೂ ಹೆಚ್ಚು ಸಚಿವರಿದ್ದರು. ಆದರೆ ಮೋದಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ. ದೇಶದ ಇತಿಹಾಸ ತಿರುಚುವ ಪ್ರಯತ್ನ ಗುಪ್ತವಾಗಿ ನಡೆಯುತ್ತಿದೆ.

ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. 2019ರಲ್ಲಿ ಕೇಂದ್ರದಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಮರುಲ್ ಇಸ್ಲಾಂ ಸೇರಿದಂತೆ ರಾಜ್ಯ ಸಂಪುಟದ ಐವರು ಸಚಿವರ ವಿರುದ್ಧ ವ್ಯಕ್ತವಾಗಿರುವ ಆರೋಪದ ಬಗ್ಗೆ ನಾನು ವರದಿ ಕೇಳಿದ್ದೇನೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವೇಚನೆಗೆ ಬಿಟ್ಟಿದ್ದು. ನ.16 ರಂದು ಮುಖ್ಯಮಂತ್ರಿಯವರ ಜತೆ ನಾನು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜತೆ ಚರ್ಚೆ ನಡೆಸಲಿದ್ದೇವೆ. ನಿಗಮ-ಮಂಡಳಿ ಪಟ್ಟಿಗೆ ಒಪ್ಪಿಗೆ ಪಡೆಯಲಾಗುವುದು ಎಂದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com