
ಚೆನ್ನೈ: ದೇಶದಾದ್ಯಂತ ಚರ್ಚೆಗಳಿಗೆ ಗ್ರಾಸವಾಗಿದ್ದಂತಹ ಕಿಸ್ ಆಫ್ ಲವ್ ಆಚರಣೆಗೆ ಮದ್ರಾಸ್ ನ ಭಾರತೀಯ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಮದ್ರಾಸ್ ನಲ್ಲಿ ಕಿಸ್ ಆಫ್ ಲವ್ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಪ್ರತಿಭಟನೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಬೆರಳಣಿಕೆಯ ವಿದ್ಯಾರ್ಥಿಗಳಷ್ಟೇ ಪಾಲ್ಗೊಂಡಿದ್ದರು.
ನೈತಿಕ ಪೊಲೀಸ್ ಗಿರಿಯ ಮೂಲಕ ಯುವಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಮದ್ರಾಸ್ ನ ಐಐಟಿ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪಸ್ ನ ಮುಂದೆ ಪ್ರತಿಭಟನೆಗೆ ಇಳಿದಿದ್ದರು.
ಈ ವೇಳೆ ಹಲವು ವಿದ್ಯಾರ್ಥಿಗಳು ತಮ್ಮ ಪ್ರೀತಿ ಪಾತ್ರರನ್ನು ಆಲಂಗಿಸಿ ಚುಂಬಿಸುವ ಮೂಲಕ ಕೇರಳದ ಕಿಸ್ ಆಫ್ ಲವ್ ಆಚರಣೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ವಿದೇಶಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುವಾಗ ಮೊದಲು ಆಲಂಗಿಸಿ, ಚುಂಬಿಸುತ್ತಾರೆ. ನಿಮ್ಮ ಮಕ್ಕಳು ವಿದೇಶಕ್ಕೆ ಹೋದಾಗ ಅಲ್ಲಿ ಅವರು ಆಲಂಗಿಸುವುದನ್ನು ಒಪ್ಪಿಕೊಳ್ಳುತ್ತಿರುವ ನೀವು ಅದೇ ಪ್ರವೃತ್ತಿ ನಮ್ಮ ದೇಶದಲ್ಲಾದಾಗ ಧಿಕ್ಕರಿಸುತ್ತೀರಾ? ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ನ.2 ರಂದು ಕೇರಳದಲ್ಲಿ ಮರೀನ್ ಡ್ರೈವ್ ನಲ್ಲಿ ನಡೆದ ಕಿಸ್ ಆಫ್ ಲವ್ ಆಚರಣೆಗೆ ದೇಶಾದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Advertisement