ಕಡಲೆಕಾಯಿ ಪರಿಷೆ ಮುನ್ನವೇ ಮಾರಾಟ

ಕಾರ್ತಿಕ ಮಾಸದಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಸಿದ್ಧತೆ...
ಬೆಂಗಳೂರು ಕಡಲೆಕಾಯಿ ಪರಿಷೆ
ಬೆಂಗಳೂರು ಕಡಲೆಕಾಯಿ ಪರಿಷೆ

ಬೆಂಗಳೂರು: ಕಾರ್ತಿಕ ಮಾಸದಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಚಾಲನೆಗೆ ಮುನ್ನವೇ ವ್ಯಾಪಾರ, ತಳ್ಳುಗಾಡಿ, ಟೆಂಟ್ ಅಂಗಡಿಗಳು ಸಿದ್ಧವಾಗಿವೆ. ನ.17 ಹಾಗೂ 18ರಂದು ಪರಿಷೆ ನಡೆಯಲಿದ್ದು, ಈಗಾಗಲೇ ವ್ಯಾಪಾರವೂ ಆರಂಭವಾಗಿದೆ.

ವಾರಾಂತ್ಯವಾಗಿರುವುದರಿಂದ ಚಾಲನೆಗೆ ಮುನ್ನವೇ ಹಲವು ಮಳಿಗೆಗಳಲ್ಲಿ ವ್ಯಾಪಾರ ನಡೆಯುತ್ತಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ತೆರಳುತ್ತಿದ್ದಾರೆ. ಬಸವನಗುಡಿ ರಸ್ತೆಯಲ್ಲಿ ಶನಿವಾರವೇ ಉತ್ಸವದ ಕಳೆ ಮೂಡಿದ್ದು, ದೊಡ್ಡ ಗಣಪತಿ ದೇವಸ್ಥಾನದ ಮುಂಭಾಗ ಸಾಲುಸಾಲಾಗಿ ಮಳಿಗೆಗಳು ತಲೆ ಎತ್ತಿವೆ. ಸ್ಥಳೀಯರೂ ಹೊರಗಿನಿಂದ ಆಗಮಿಸುತ್ತಿರುವ ರೈತರಿಗೆ ನೆರವಾಗುತ್ತಿದ್ದು, ಉತ್ಸವದ ವಾತಾವರಣ ಸೃಷ್ಟಿಯಾಗಿದೆ.

500 ವರ್ಷಗಳ ಇತಿಹಾಸವಿರುವ ಕಡಲೇಕಾಯಿ ಪರಿಷೆಯಲ್ಲಿ ಸಂಪ್ರದಾಯ ದಂತೆ ರೈತರು ಬೆಳೆದ ಕಡಲೆಕಾಯಿಯ ಮೊದಲ ಇಳುವರಿಯನ್ನು ಬಸವನಿಗೆ ಅರ್ಪಿಸಲಾಗುತ್ತದೆ. ಬಸವನ ಗುಡಿ ರಸ್ತೆಯುದ್ದಕ್ಕೂ ಉತ್ಸವದ ಕಳೆ ಮೂಡಿದ್ದು, ರೈತರ ಎಲ್ಲ ಬೆಳೆಯನ್ನೂ ಬಸವನಿಗೆ ಅರ್ಪಿಸುವಂತೆ ಕಡಲೆಕಾಯಿ ರಾಶಿ ಹಾಕಲಾಗಿದೆ. ದೂರದೂರುಗಳಿಂದ ಮಾರಾಟಗಾರರು ಹಾಗೂ ರೈತರು ಲಾರಿ ಹಾಗೂ ಟೆಂಪೋಗಳಲ್ಲಿ ಕಡಲೆಕಾಯಿ ತಂದು ರಾಶಿ ಹಾಕುತ್ತಿದ್ದಾರೆ.

ಬೆಂಗಳೂರಿನ ಸುತ್ತಮುತ್ತಲ ಹಳ್ಳಿ ಹಾಗೂ ನೆರೆ ರಾಜ್ಯಗಳಿಂದ ಬಂದಿರುವ ರೈತರು ವಿವಿಧ ತಳಿ, ಗಾತ್ರ, ರುಚಿಗಳ ಕಡಲೆಕಾಯಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಫುಟ್ಪಾತ್ಗಳಲ್ಲಿ ಕಡಲೆಕಾಯಿ ಮೂಟೆಗಳನ್ನು ಜೋಡಿಸಿಡಲಾಗಿದೆ. ಕೆಲವೆಡೆ ಪ್ಲಾಸ್ಟಿಕ್ ಶೀಟ್ ಗಳನ್ನು ಹಾಕಿ ಮಳಿಗೆ ನಿರ್ಮಿಸುತ್ತಿದ್ದರೆ ಮತ್ತೆ ಕೆಲವೆಡೆ ತಳ್ಳುಗಾಡಿಗಳು ಸಿದ್ಧವಾಗಿವೆ.

ಹೊರರಾಜ್ಯಗಳ ಬೆಳೆ
ನಗರದ ಸುತ್ತಮುತ್ತ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಡಲೆ ಕಾಯಿ ಮಾರಾಟಗಾರರು ಬರುವುದು ಪರಿಷೆಯ ವಿಶೇಷ. ಕೋಲಾರ, ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಪ್ರದೇಶಗಳಿಂದಲೂ ಮಾರಾಟಗಾರರು ಬರಲಿದ್ದಾರೆ.

ಹಸಿ, ಸುಟ್ಟ, ಬೇಯಿಸಿದ, ಹುರಿದ, ಮಸಾಲೆ ಬೆರೆಸಿದ, ಬೆಲ್ಲ ಮಿಶ್ರಣ ಮಾಡಿದ ಕಡಲೆಕಾಯಿಗಳಿಗೆ ಇಲ್ಲಿ ಭಾರೀ ಬೇಡಿಕೆಯಿದೆ. ಕಡಲೆಕಾಯಿಗೆ ಸಿಹಿ ಬೆರಿಸಿ ಮಿಠಾಯಿ ರೂಪದಲ್ಲಿ ನೀಡುವುದರಿಂದ ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸಲಿದೆ. ಪ್ರತಿ ಲೀಟರ್ಗೆ 20ರಿಂದ 40ರಂತೆ ಕಡಲೆಕಾಯಿ ಮಾರಾಟವಾಗಲಿದೆ.

ಮಳೆ ಭೀತಿ
ಎರಡು ದಿನ ಮಾತ್ರ ಕಡಲೆಕಾಯಿ ಪರಿಷೆ ನಡೆದರೂ ಹಿಂದಿನ ದಿನ ಹಾಗೂ ಮುಗಿದ ಬಳಿಕವೂ ಮಾರಾಟ ಕಡಿಮೆಯಾಗುವುದಿಲ್ಲ. ಆದರೆ ಈ ಬಾರಿ ಮಳೆಯಿಂದಾಗಿ ಮಳಿಗೆಗಳಿಗೆ ಹಾನಿಯಾಗಬಹುದು ಎಂಬುದು ರೈತರ ಅಳಲು. ಕೇವಲ ಪ್ಲಾಸ್ಟಿಕ್ ಶೀಟ್ಗಳನ್ನು ಕಟ್ಟಿ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುವವರಿಗೆ ಈ ವರ್ಷ ಮಳೆ ಬಾಧಿಸಬಹುದು.

ನಾಳೆ ಬೆಳಿಗ್ಗೆ 10ಕ್ಕೆ ಆರಂಭ


ನ.17ರ ಬೆಳಿಗ್ಗೆ 10ಕ್ಕೆ ಕೇಂದ್ರ ಸಚಿವ ಅನಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮೇಯರ್ ಶಾಂತಕುಮಾರಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ರವಿ ಸುಬ್ರಹ್ಮಣ್ಯ, ಆರ್.ವಿ.ದೇವರಾಜ್, ಎಂಎಲ್ಸಿ ಟಿ.ಎ.ಸರವಣ ಆಗಮಿಸಲಿದ್ದಾರೆ. ಸಂಜೆ ನರಸಿಂಹಸ್ವಾಮಿ ಉದ್ಯಾನ ಹಾಗೂ ಕಹಳೆಬಂಡೆ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com