
ನವದೆಹಲಿ: ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಉಕ್ಕಿನ ಮನುಷ್ಯ 'ಸರಧಾರ್ ವಲ್ಲಭಾಯಿ ಪಟೇಲ್' ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ಬಳಿಕ ಇದೀಗ ಕಾಂಗ್ರೆಸ್ಸಿನ ಸರದಿಯಾಗಿದೆ.
ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ಇಂದಿನಿಂದ ಆರಂಭವಾಗಿರುವ 2 ದಿನಗಳ ಅಂತರಾಷ್ಟ್ರೀಯ ಸಮ್ಮೇಳನದ ಮೂಲಕ ದೇಶದ ಗಮನ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಭಾರತದ ಪ್ರಧಾನಿ ಜವಹರಲಾಲ್ ನೆಹರು ಅವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಎಐಸಿಸಿ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ಭಾಗವಹಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಜವಹರಲಾಲ್ ನೆಹರು ಅವರ ಸಾಧಾನೆಗಳನ್ನು ಕೊಂಡಾಡಿದರು. ದೇಶದ ಅಭಿವೃದ್ದಿಗೆ ಜವಹರ ಲಾಲ್ ನೆಹರು ಅವರ ಕೊಡುಗೆ ಅಪಾರ. ಆಧುನಿಕ ಭಾರತದ ಜನಕ, ದೇಶದ ಅಭಿವೃದ್ದಿಗಾಗಿ ನೆಹರು ತಮ್ಮ ಜೀವನವನ್ನೇ ಮುಡುಪಾಗಿಸಿಟ್ಟರು ಎಂದು ವಿವರಿಸಿದರು.
ಸಾರ್ವಜನಿಕ ರಂಗದ ಕೈಗಾರಿಗಳನ್ನು ನೆಹರು ಬೆಳೆಸಿದ್ದರು, ಜ್ಯಾತ್ಯಾತೀತತೆ ಇಲ್ಲದ ಭಾರತೀಯತೆ ಅಪೂರ್ಣ ಎಂದ ಸೋನಿಯಾ, ನೆಹರು ದೇಶದ ಎಲ್ಲ ಧರ್ಮಗಳನ್ನು ಸಮಾನ ರೀತಿಯಲ್ಲಿ ಕಂಡು ಗೌರವಿಸಿದರು. ನಮ್ಮ ಆಡಳಿತದಲ್ಲೂ ನೆಹರು ಅವರ ಚಿಂತನೆಗಳು ತತ್ವಗಳಿಗೆ ಒತ್ತು ನೀಡಿದ್ದೆವು ಎಂದು ಸಮರ್ಥಿಸಿಕೊಂಡರು.
ದೇಶದ ಔದ್ಯೋಗಿಕರಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ, ದೇಶವನ್ನು ಅಭಿವೃದ್ದಿಯತ್ತ ಸಾಗಿಸಿದ್ದರು ಎಂದು ನೆಹರು ಅವರ ಚಿಂತನೆಗಳನ್ನು ಹಾಡಿ ಹೊಗಳಿದರು.
ಇದೇ ವೇಳೆ ಎಲ್ಲ ರಾಜ್ಯಗಳಿಗೂ ಸಮಾನ ಅಧಿಕಾರಿ ನೀಡಿ ಎಂದು ಹೇಳುವ ಮೂಲಕ ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರಕ್ಕೂ ಸೋನಿಯಾ ಗಾಂಧಿ ಟಾಂಗ್ ನೀಡಿದರು.
2 ದಿನಗಳ ಕಾಲದ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಎನ್‌ಡಿಎ ಪಕ್ಷಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಐಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ, ಜೆಡಿಯು ನಾಯಕ ನಿತೀಶ್ ಕುಮಾರ್, ಆರ್‌ಜೆಡಿ ಪಕ್ಷದ ಲಾಲ್ ಪ್ರಸಾದ್ ಯಾದವ್, ಹಾಗೂ ಆರ್‌ಎಲ್‌ಡಿ, ಜೆಡಿಎಸ್, ಸಮಾಜವಾದಿ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ.
ಈ ಮೂಲಕ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಡಿದ ಪ್ರಮುಖ ನಾಯಕರುಗಳು ಕೆಲವೇ ಕೆಲವು ಪಕ್ಷಗಳಿಗೆ ಸೀಮಿತರಾಗುತ್ತಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡತೊಡಗಿದೆ.
Advertisement