ಶಿವಸೇನೆ-ಬಿಜೆಪಿ ಮರುಮೈತ್ರಿ ಸಾಧ್ಯತೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ...
ಉದ್ಧವ್ ಠಾಕ್ರೆ ಮತ್ತು ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
ಉದ್ಧವ್ ಠಾಕ್ರೆ ಮತ್ತು ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)

ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದ್ದ ಶಿವಸೇನೆ ಮತ್ತೊಮ್ಮೆ ಬಿಜೆಪಿಯೊಂದಿಗೆ ಮರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಶಿವಸೇನೆಯ ಮರು ಮೈತ್ರಿ ಕುರಿತು ಮಧ್ಯಸ್ಥಿಕೆ ವಹಿಸಿ ಸಂಧಾನ ನಡೆಸಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು ಮರುಮೈತ್ರಿಗಾಗಿ ಮನವೊಲಿಸಿದ್ದಾರೆ. ಬಿಜೆಪಿ ಹಾಗೂ ಶಿವಸೇನೆ ಮರುಮೈತ್ರಿಯಾಗುವ ವಿಶ್ವಾಸವಿದೆ ಎಂದು ಶಿವಸೇನಾ  ಮುಖಂಡ ಮನೋಹರ್ ಜೋಷಿ ಹೇಳಿದ್ದಾರೆ.  

ಬಾಳಾ ಠಾಕ್ರೆ ಅವರ ಎರಡನೇ ಪುಣ್ಯ ತಿಥಿಯ ಅಂಗವಾಗಿ ಶಿವಾಜಿ ಉದ್ಯಾನವನದಲ್ಲಿದ್ದ ಠಾಕ್ರೆ ಅವರ ಸಮಾಧಿಗೆ ಗೌರವ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮನೋಹರ್ ಜೋಷಿ, ಬಾಳಾ ಠಾಕ್ರೆಯವರಂತಹ ಮನುಷ್ಯರು ಮತ್ತೆ ಹುಟ್ಟಿ ಬರಲು ಸಾಧ್ಯವೇ ಇಲ್ಲ, ಅವರಿಗೆ ನೆರಳಾಗಿ ಇದ್ದದ್ದು ನನ್ನ ಅದೃಷ್ಟ. ದುರದೃಷ್ಟಕರ ಸಂಗತಿ ಎಂದರೆ ಹಿಂದಿದ್ದ ಸರ್ಕಾರ ಬಾಳ ಠಾಕ್ರೆಯವರ ಸಮಾಧಿಯನ್ನು ಸ್ಮಾರಕವನ್ನಾಗಿ ನಿರ್ಮಿಸಲು ವಿಫಲವಾಗಿದೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಹಿಂದುತ್ವದ ಆಧಾರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಹಿಂತಿರುಗಲಿದ್ದು ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಕೈ ಜೋಡಿಸುವ ಸಾಧ್ಯತೆ ಇದೆ. ಆದರೆ ಮರು ಮೈತ್ರಿ ಯಾವಾಗ ಆಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಮರುಮೈತ್ರಿ ಕುರಿತ ನಿರ್ಧಾರ ಉದ್ಧವ್‌ಠಾಕ್ರೆ ಮೇಲೆ ಇದ್ದು ಅವರ ನಿರ್ಧಾರದ ನಂತರವಷ್ಟೇ ಹೇಳಲು ಸಾಧ್ಯ ಎಂದ ಅವರು ಮಹಾರಾಷ್ಟ್ರ ಜನತೆ ಖಂಡಿತವಾಗಿಯೂ ಮುಂದೊಂದು ದಿನ ಶಿವಸೇನೆಯ ಮುಖಂಡನೊಬ್ಬ ಮುಖ್ಯಮಂತ್ರಿಯಾಗುವುದನ್ನು ಕಾಣಲಿದ್ದಾರೆ. ಎಂದು ಜೋಷಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com