
ಚೆನ್ನೈ: ನನಗೆ ರಾಜಕೀಯ ಎಂದರೆ ಭಯವಿಲ್ಲ. ಆದರೆ ಅದರೊಳಗೆ ಧುಮುಕಲು ಸಂಕೋಚವಾಗುತ್ತದೆ'.ಹೀಗೆಂದು ಹೇಳಿದ್ದು ಬೇರ್ಯಾರು ಅಲ್ಲ, ತಮಿಳು ಸೂಪರ್ ಸ್ಟಾರ್ ರಜನೀಕಾಂತ್.
ಚೆನ್ನೈನಲ್ಲಿ ಭಾನುವಾರ ತಮ್ಮ ಹೊಸ ತ್ರಿಭಾಷಾ ಚಿತ್ರ 'ಲಿಂಗಾ' ಧ್ವನಿಸುರುಳಿ ಹಾಗು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿ, ರಾಜಕೀಯ ಎಂಬುದು ತುಂಬಾ ಆಳ ಹಾಗೂ ಅಪಾಯಕಾರಿ. ರಾಜಕೀಯದಲ್ಲಿ ಬಲಿಷ್ಠ ಬೇರುಗಳಿರಬೇಕಾದ್ದು ಮುಖ್ಯ ಎಂದರು.
ರಾಜಕೀಯ ಎಂದರೆ ನನಗೆ ಭಯವೇನೂ ಇಲ್ಲ. ಆದರೆ ಅದರಲ್ಲಿ ಧುಮುಕಲು ಸಂಕೋಚವಾಗುತ್ತದೆ. ದೇವರು ತೋರಿಸಿದ ದಾರಿಯಲ್ಲಿ ನಾನು ಸಾಗುತ್ತಿದ್ದೇನೆ. ದೇವರು ಬಯಸಿದರೆ ಮಾತ್ರ ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ 'ರಜನೀಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ' ಎಂಬ ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆಪುಕ್ಕಗಳು ಸೇರಿಕೊಂಡಿವೆ.
ಇದೇ ವೇಳೆ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ಚಿತ್ರ 'ಲಿಂಗಾ' ಚಿತ್ರದ ಧ್ವನಿಸುರುಳಿ ಹಾಗು ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಚಲನಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ರಾಕ್ಲೈನ್ ಪ್ರೊಡಕ್ಷನ್ ನಿರ್ಮಾಣದ 'ಲಿಂಗಾ', ರಜನಿ ಅವರ 64ನೇ ಜನ್ಮದಿನವಾದ ಡಿ. 12ರಂದು ತೆರೆಕಾಣಲಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಅಣೆಕಟ್ಟಿನ ಸಮೀಪವೂ ಇದರ ಚಿತ್ರೀಕರಣ ನಡೆದಿದೆ.
2.04 ನಿಮಿಷಗಳ ಟ್ರೈಲರ್ ಬಿಡುಗಡೆ ವೇಳೆ ನಟಿಯರಾದ ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತಿತರರು ಇದ್ದರು.
Advertisement