

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರ ದಮನಕ್ಕೆ ಕೇಂದ್ರ ಸರ್ಕಾರ ಮಹಿಳಾ ಕಮಾಂಡೋ ಪಡೆ ನಿಯೋಜಿಸಲು ಆರಂಭಿಸಿದೆ.
ಅದರಂತೆ ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳು ನಕ್ಸಲ್‌ಪೀಡಿತ ಪ್ರದೇಶಗಳ ಕಾಡಿನಲ್ಲಿ ಕಾರ್ಯಾಚರಣೆಗಿಳಿಯಲ್ಲಿದ್ದಾರೆ. ಈ ಮೂಲಕ ಈ ಮಹಿಳಾ ಕಮಾಂಡೋಗಳು ಕೂಡ ನಕ್ಸಲರ ಹೆಡೆಮುರಿ ಕಟ್ಟುವ ಕಾರ್ಯದಲ್ಲಿ ಪುರುಷರ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಲಿದ್ದಾರೆ.
ಈಗಗಾಗಲೇ ಇಂಥ ಒಂದು ಮಹಿಳಾ ಕಮಾಂಡೋ ಪಡೆಯನ್ನು ಚತ್ತೀಸ್‌ಗಡದ ಬಸ್ತಾರ್‌ನಲ್ಲಿ ನಿಯೋಜಿಸಲಾಗಿದೆ. ಬಸ್ತಾರ್ ಪ್ರದೇಶ ನಕ್ಸಲರ ದಾಳಿಯಿಂದಾಗಿಯೇ ಕುಖ್ಯಾತಿಗಳಿಸಿದ ಊರಾಗಿದೆ. ಈ ಮಹಿಳಾ ಕಮಾಂಡೋಗಳು ಯಾವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಕೇವಲ ಆಯಕಟ್ಟಿನ ಜಾಗದಲ್ಲಿರುವ ಕೆಲ ಹಿರಿಯ ಅಧಿಕಾರಿಗಳಿಗಷ್ಟೇ ಗೊತ್ತಿದೆ. ಈ ರೀತಿ ಮಹಿಳೆಯರನ್ನು ನಿಯೋಜಿಸುವುದರಿಂದ ಅನೇಕ ಅನುಕೂಲಗಳಿವೆ.
ಮೊದಲೆಯದು ಗ್ರಾಮದ ಮಹಿಳೆಯರ ಜತೆಗೆ ಮುಕ್ತವಾಗಿ ಬೆರೆಯುವುದು ಸುಲಭವಾಗುತ್ತದೆ. ಇದರಿಂದ ಗುಪ್ತಚರ ಮಾಹಿತಿ ಸಂಗ್ರಹಿಸಲು ಅನೂಕೂಲವಾಗುತ್ತದೆ. ಇದೇ ಮಾದರಿಯನ್ನು ಪಶ್ಚಿಮ ಬಂಗಾಲದಲ್ಲಿ ಅನುಸರಿಸಿರುವ ಭದ್ರತಾಪಡೆಗಳು ಅಲ್ಲಿ ಯಶಸ್ಸನ್ನೂಗಳಿಸಿವೆ.