ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮನ್ನಣೆ

ನಗರದ ಬಸವನಗುಡಿಯ ಕಡ್ಲೆಕಾಯಿ ಪರಿಷೆಯನ್ನು ಇನ್ನು ಮುಂದೆ...
ಬಸವನಗುಡಿ  ಕಡ್ಲೆಕಾಯಿ ಪರಿಷೆ
ಬಸವನಗುಡಿ ಕಡ್ಲೆಕಾಯಿ ಪರಿಷೆ
Updated on

ಬೆಂಗಳೂರು: ನಗರದ ಬಸವನಗುಡಿಯ ಕಡ್ಲೆಕಾಯಿ ಪರಿಷೆಯನ್ನು ಇನ್ನು ಮುಂದೆ ರಾಷ್ಟ್ರೀಯ ಪರಿಷೆಯನ್ನಾಗಿ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಆರಂಭವಾದ ಕಡ್ಲೆಕಾಯಿ ಪರಿಷೆಯಲ್ಲಿ ಬಸವಣ್ಣನ ತುಲಾಭಾರ ನೆರವೇರಿಸಿ ಜಾತ್ರೆ ಉದ್ಘಾಟಿಸಿದ ಅವರು ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮಟ್ಟದ ಖ್ಯಾತಿ ಸಿಗಬೇಕಿದೆ ಎಂದರು. 15 ವರ್ಷಗಳ ಹಿಂದೆ ಬೆಂಗಳೂರು ಕರಗ ಉತ್ಸವ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರಲಿಲ್ಲ.

ನಾನು ಕೇಂದ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವನಾಗಿದ್ದಾಗ ಕರಗ ಉತ್ಸವದ ಬಗ್ಗೆ ವಿದೇಶಗಳವರೆಗೂ ಪ್ರಚಾರವಾಗುವಂತೆ ಮಾಡಿದೆ. ಅಂದರೆ ದೇಶ, ವಿದೇಶಗಳ ರಾಯಭಾರ ಕಚೇರಿಗಳಲ್ಲಿ ಬೆಂಗಳೂರು ಕರಗ ಉತ್ಸವದ ಬಗ್ಗೆ ಕರಪತ್ರಗಳನ್ನು ಹಂಚಿಕೆ ಮಾಡಲಾಯಿತು. ಆ ನಂತರ ವಿದೇಶಿ ಪ್ರವಾಸಿಗರೂ ಬೆಂಗಳೂರು ಕರಗ ಉತ್ಸವ ನೋಡಲು ಬರಲಾರಂಭಿಸಿ, ಕರಗ ಇನ್ನೂ ಹೆಚ್ಚು ಖ್ಯಾತಿ ಗಳಿಸಿತು ಎಂದು ವಿವರಿಸಿದರು.

ಬಸವನಗುಡಿಯ ಕಡ್ಲೆಕಾಯಿ ಪರಿಷೆ ಐತಿಹ್ಯ ಮತ್ತು ಖ್ಯಾತಿಯ ಬಗ್ಗೆ ಕರಪತ್ರ ಸಿದ್ಧವಾಗುವಂತೆ ಮಾಡಲಾಗುವುದು. ಅದು ಎಲ್ಲ ರಾಯಭಾರ ಕಚೇರಿಗಳಲ್ಲೂ ಪ್ರವಾಸಿಗರಿಗೆ ಸಿಗುವಂತೆ ಮಾಡಿ ಪರಿಷೆಗೆ ಒಂದು ರಾಷ್ಟ್ರೀಯ ಖ್ಯಾತಿ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

ಕಡ್ಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ಇಂದಿನ ಮಾರುಕಟ್ಟೆ ವ್ಯವಸ್ಥೆಗೆ ಈ ಪರಿಷೆ ಮೂಲ ಆಗಿದೆ ಎಂದು ಅನಂತಕುಮಾರ್ ವಿಶ್ಲೇಷಿಸಿದರು.

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮೇಯರ್ ಶಾಂತಕುಮಾರಿ, ಶಾಸಕ ರವಿಸುಬ್ರಮಣ್ಯ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಹಾಜರಿದ್ದರು. ವರ್ತಕರ ಸಂಘದ ಅಧ್ಯಕ್ಷ ಕೋಟೆ ಸೂರ್ಯನಾರಾಯಣ ರಾವ್ ಹಾಜರಿದ್ದರು.

ಪರಿಷೆಯಲ್ಲಿ ಕಡ್ಲೆಕಾಯಿ ಪರಿಮಳದ ಜತೆಗೆ ಕನ್ನಡದ ಕಂಪು ಬೆರೆಯಿತು. ಹಾಗೆಯೇ ಪರಿಸರ ಸಂರಕ್ಷಣೆಯ ದನಿಯೂ ಮೊಳಗಿತು.

ಕಡ್ಲೆಕಾಯಿ ತಿಂದು ಕಲ್ಲಾದ ಬಸವ

ಐತಿಹ್ಯದ ಪ್ರಕಾರ ಹಿಂದೆ ಬಸವನಗುಡಿ ಹಳ್ಳಿಗಳ ಸಮೂಹವಾಗಿತ್ತು. ಅಂದರೆ ಸುಂಕೇನಹಳ್ಳಿ, ಗವಿಪುರ, ಮಾವಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಜನರು ದೊಡ್ಡ ಬಸವಣ್ಣನ ಗುಡಿಗೆ ಬರುತ್ತಿದ್ದರು. ಇಲ್ಲಿನ ಜನರು ಪ್ರತಿವರ್ಷ ಕಡ್ಲೆಕಾಯಿ ಬೆಳೆದಾಗ ಫಸಲು ತೆಗೆಯುವ ವೇಳೆ ಎತ್ತೊಂದು ಬಂದು ಕಡ್ಲೆಕಾಯಿ ಬೆಳೆಯನ್ನು ತಿಂದು ಹೋಗುತ್ತಿತ್ತು. ಹಾಗೆಯೇ ಬೆಳೆ ನಾಶ ಮಾಡಿ ಹೋಗುತ್ತಿತ್ತು.

ಇದರಿಂದ ಸಿಟ್ಟಿಗೆದ್ದ ರೈತರು ಒಮ್ಮೆ ಒಟ್ಟಾಗಿ ಎತ್ತನ್ನು ಅಟ್ಟಿಸಿ ಹೊಡೆಯಲು ಯತ್ನಿಸಿದ್ದರು. ಹೆದರಿ ಓಡಿದ ಎತ್ತು ಬಸವನಗುಡಿ ಬಳಿ ಬಂದು ಕಲ್ಲಾಯಿತು. ಇದನ್ನು ಗಮನಿಸಿದ ರೈತರು ಈಶ್ವರನ ವಾಹನ ನಂದಿಯೇ ಬಂದು ತಿನ್ನುತ್ತಿತ್ತು ಎಂದು ನಂಬಿದರು. ಅಲ್ಲದೆ ಪ್ರತಿವರ್ಷ ಕಡ್ಲೆಕಾಯಿ ಫಸಲನ್ನು ಮೊದಲು ಬಸವಣ್ಣನಿಗೆ ಅರ್ಪಿಸಲು ತೀರ್ಮಾನಿಸಿದರು. ಆ ನಂತರ ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವಣ್ಣನಿಗೆ ಕಡ್ಲೆಕಾಯಿ ಅರ್ಪಿಸುತ್ತಾ ಬಂದರು. ಹಾಗೆಯೇ ಬಸವನಗುಡಿ ಮುಂದೆ ಕಡ್ಲೆಕಾಯಿ ಮಾರಾಟ ಮಾಡುತ್ತಾ ಬಂದರು. ಮುಂದೆ ಅದೇ ಕಡ್ಲೆಕಾಯಿ ಪರಿಷೆ ಆಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com