179 ನಾಟ್ಔಟ್, ಸಾವೇ ಗೆಟ್ಔಟ್!

ಭೂಮಿ ಮೇಲಿರುವ ಅತ್ಯಂತ ಹಿರಿ ತಲೆಯ ಮಹಾಸ್ತ ಮುರಸಿ
ಮಹಾಸ್ತ ಮುರಸಿ
ಮಹಾಸ್ತ ಮುರಸಿ
Updated on

ಭೂಮಿ ಮೇಲಿರುವ ಅತ್ಯಂತ ಹಿರಿ ತಲೆಯ ಮಹಾಸ್ತ ಮುರಸಿ

ವಾರಣಾಸಿ:
ಈ ಅಜ್ಜನ ಮರಣಶಾಸನ ಬರೆಯಲು ಆ ಚಿತ್ರಗುಪ್ತ ಮರೆತಿರಬೇಕು. ಇಲ್ಲವೇ ಪಾಶದಲ್ಲಿ ಪ್ರಾಣಪಕ್ಷಿ ಹೊತ್ತೊಯ್ಯಲು ಯಮಧರ್ಮ ರಾಜನಿಗೆ ಪುರಸೋತ್ತಿಲ್ಲದಿರಬೇಕು. ಕಾರಣ ಇಷ್ಟೆ, ಈತನ ವಯಸ್ಸು ಬರೋಬ್ಬರಿ 179 ವರ್ಷ! ಹೀಗಾಗಿ ಆತನೇ ಹೀಗಂತ ಹೇಳಿಕೊಂಡಿದ್ದಾನೆ.

ಈತ ಜನಿಸಿದ್ದು ಜನವರಿ 6, 1835ರಲ್ಲಂತೆ. ಸದ್ಯದ ಮಟ್ಟಿಗೆ ಭೂಮಿಯಲ್ಲಿರುವ ಏಕೈಕ ಹಿರಿ ತಲೆಯಾಗಿರುವ ಈ ಹಿರಿಯಜ್ಜನ ಹೆಸರು ಮಹಾಸ್ತ ಮುರಸಿ, ಈತ ಜನಿಸಿದ್ದು ಬೆಂಗಳೂರಿನಲ್ಲಿ. ಚಮ್ಮಾರಿಕೆ ವೃತ್ತಿಯಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದ್ದ ಮುರಸಿ, 1903ರಿಂದ ವಾರಣಾಸಿಯಲ್ಲಿಯೇ ನೆಲೆಯೂರಿದ್ದಾನೆ.

1957ರವರೆಗೆ ಚಮ್ಮಾರ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ತನ್ನ 122ನೇ ವಯಸ್ಸಿನಲ್ಲಿ ವೃತ್ತಿಗೆ ಗುಡ್ಬೈ ಹೇಳಿ, ನಂತರ ತನ್ನ ಮಕ್ಕಳು, ಮೊಮ್ಮಕ್ಕಳ ಆಶ್ರಯದಲ್ಲಿ ಜೀವನ ಸಾಗಿಸುತ್ತಿದ್ದಾನೆ.

ನನ್ನೆದುರಿಗೇ ಮಕ್ಕಳು, ಮೊಮ್ಮಕ್ಕಳೂ ಸತ್ತಿದ್ದಾರೆ :
'ನಾನು ಬಹಳ ವರ್ಷಗಳ ಕಾಲ ಬದುಕಿದ್ದೇನೆ. ನನ್ನ ಕಣ್ಣೇದುರೇ ಪತ್ನಿ, ಮಕ್ಕಳು, ಮೊಮ್ಮಕ್ಕಳು ಅಸುನೀಗಿದ್ದಾರೆ. ಇನ್ನೂ ಎಷ್ಟು ವರ್ಷ ನಾನು ಅನುಭವಿಸಬೇಕೋ ಗೊತ್ತಿಲ್ಲ. ಬಹುಶಃ ಸಾವೂ ಸಹ ನನ್ನನ್ನು ಮರೆತಿರಬಹುದು. ಈಗ ನನಗೆ ಯಾವುದೇ ಭರವಸೆ ಇಲ್ಲ. ಅಂಕಿ-ಅಂಶವನ್ನು ನೀವು ನೋಡುವುದಾದರೆ, 150 ವರ್ಷಕ್ಕಿಂತ ಹೆಚ್ಚು ಸಮಯ ಯಾರೂ ಬದುಕಿಲ್ಲ.

ಇನ್ನು 170 ವರ್ಷವನ್ನು ಕೇಳಲೇ ಬೇಡಿ. ನಾನು ಸಾವಿಲ್ಲದ ಮನುಷ್ಯನೇ ಅಥವಾ ಅದಕ್ಕಿಂತ ಹೆಚ್ಚೇ ಎಂಬುದು ಇದೀಗ ನನಗೆ ಕಾಡುತ್ತಿರುವ ಸಂಶಯ. ಆದರೆ,ನಾನು ಇದನ್ನು ತುಂಬಾ ಸಂತಸದಿಂದ ಅನುಭವಿಸಿದ್ದೇನೆ' ಎಂದು ಮುರಸಿ ಹೇಳಿಕೊಂಡಿದ್ದಾನೆ.

ಈತ ನೀಡುವ ಜನನ ಪ್ರಮಾಣಪತ್ರ, ಗುರುತಿನ ಪತ್ರಗಳ ಸಹಿತ ಇನ್ನಿತರ ದಾಖಲೆಗಳು 179 ವರ್ಷ ಆಗಿರುವುದು ನಿಜ ಎಂಬುದನ್ನು ದೃಢೀಕರಿಸುತ್ತದೆ. ಈಗ ಅತಿ ಹೆಚ್ಚು ಕಾಲ ಬದುಕಿರುವ ಅಜ್ಜನ ಹೆಸರು ವಿಶ್ವ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.

ಸತ್ಯವೇ ಅಥವಾ ಸುಳ್ಳೇ?
ಅಂದಹಾಗೆ ವೈದ್ಯರ ಬಳಿ ಕೊನೆ ಬಾರಿ ಚಿಕಿತ್ಸೆ ಪಡೆದಿದ್ದು 1971ರಲ್ಲಿ. ಆದರೆ, ವಯಸ್ಸನ್ನು ದೃಢಪಡಿಸಲು ಇನ್ನೂ ಯಾವುದೇ ವೈದ್ಯಕೀಯ ಪರೀಕ್ಷೆ ನಡೆದಿಲ್ಲ. ಮುರಸಿಗೆ ನಿಜವಾಗಿಯೂ ಇಷ್ಟು ವರ್ಷವಾಗಿದೆಯೇ ಇಲ್ಲವೇ ಎಂಬುದು ಇನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಹೀಗಾಗಿ ಈತನ ವಯಸ್ಸು ದೃಢಪಡಿಸಲು ಪರೀಕ್ಷೆಗಳಾಗಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com