ವಿದ್ಯಾರ್ಥಿನಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶಿಕ್ಷಕಿಯೇ ತನ್ನ ಖಾಸಗಿ ಜಾಗದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲಾ ಶಿಕ್ಷಕಿಯೇ ತನ್ನ ಖಾಸಗಿ ಜಾಗದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಇಲ್ಲಿನ ಆರ್.ಟಿ.ನಗರ ದಿಣ್ಣೂರು ಮುಖ್ಯರಸ್ತೆ ನವೋದಯ ವಿದ್ಯಾನಿಕೇತನ ಶಾಲೆಯ 5 ವರ್ಷದ ಬಾಲಕಿ ಆರೋಪಿಸಿದ್ದಾಳೆ.

ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿರುವ 30 ವರ್ಷದ ಶಿಕ್ಷಕಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬಾಲಕಿ ತಂದೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಬಾಲಕಿ 1ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು ಶುಕ್ರವಾರ ಶಾಲೆಯಿಂದ ಮನೆಗೆ  ಬಂದಾಗ  ಮೂಗಿನಿಂದ ರಕ್ತಸ್ರಾವವಾಗಿದೆ ಎಂದು ಹೇಳಿದ್ದಾಳೆ. ಈ ವೇಳೆ ಪಾಲಕರು ಬಾಲಕಿಯನ್ನು ವಿಚಾರಿಸಿದಾಗ ಶಾಲೆಯ ಕೊಠಡಿಯಲ್ಲಿ ಮೇಡಮ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾಳೆ. ಹೀಗಾಗಿ ಪಾಲಕರು ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆಸ್ಪತ್ರೆಯಲ್ಲಿ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಆರ್.ಟಿ.ನಗರ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ದಾಖಲಿಸಿದ್ದರು. ಪೊಕ್ಲೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಾಲೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಶಾಲೆ ಮುಖ್ಯಸ್ಥರು ಪ್ರಕರಣದ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಇಂದು ಹೇಳಿದ್ದಾರೆ. ಶಾಲೆಯಲ್ಲಿ ಬಾಲಕಿ ತನ್ನ ಮೇಲೆ ಹಲ್ಲೆ ನಡೆದಿರುವ ವಿಚಾರವನ್ನು ಹೇಳಿಕೊಂಡಿಲ್ಲ. ಹೇಳಿದ್ದರೆ ಕೂಡಲೇ ವಿಚಾರಿಸುತ್ತಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಶಿಕ್ಷಕಿಯ ಬಂಧನಕ್ಕೆ ಆಗ್ರಹ
 ಘಟನೆ ಸುದ್ದಿ ತಿಳಿದು ಸಾರ್ವಜನಿಕರು ಶನಿವಾರ ಶಾಲೆ ಬಳಿ ಜಮಾಯಿಸಿದ್ದರು. ಸೂಕ್ತ ತನಿಖೆ ನಡೆಸಿ ಹಲ್ಲೆ ನಡೆಸಿರುವ ಶಿಕ್ಷಕಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ನಗರದ ಹಲವು ಶಾಲೆಗಳಲ್ಲಿ ಇಂತಹ ಘಟನೆಗಳು ನಡೆದಿದ್ದರೂ ಶಾಲೆ ಆಡಳಿತ ಮಂಡಳಿ ಮಕ್ಕಳ ಬಗ್ಗೆ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಘಟನೆ ಬಗ್ಗೆ 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಟಿ.ಆರ್. ಸುರೇಶ್, ಬಾಲಕಿ ಶಾಲೆಯಿಂದ ಸಂಜೆ ಮನೆಗೆ ಹೋದಾಗ ಮೂಗಿನಿಂದ ರಕ್ತಸ್ರಾವವಾಗಿತ್ತು.

ಈ ಬಗ್ಗೆ ಪಾಲಕರು ಕೇಳಿದಾಗ ತನ್ನ ಮೇಲೆ ಕೊಠಡಿಯ ಶಿಕ್ಷಕಿ (ಮೇಡಮ್) ಹಲ್ಲೆ ನಡೆಸಿರುವುದಾಗಿ ಹೇಳುತ್ತಿದ್ದಾಳೆ. ಈ ಬಗ್ಗೆ ಶಾಲೆ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ ತಮಗೆ ಘಟನೆ ಬಗ್ಗೆ ಮಾಹಿತಿಯೇ ಇಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರವೇ ಗೊತ್ತಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬಾಲಕಿಯನ್ನು ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು, ಮಕ್ಕಳ ತಜ್ಞರ ಬಳಿ ಕೌನ್ಸಿಲಿಂಗ್ ನಡೆಸುತ್ತೇವೆ. ಬಳಿಕವಷ್ಟೇ ನಿಜವಾಗಯೂ ಏನಾಗಿದೆ ಎಂದು ತಿಳಿದು ಬರಲಿದೆ' ಎಂದರು.

ಬಾಲಕಿ ಮೇಲೆ ಯಾವುದರಿಂದ ಹಲ್ಲೆ ನಡೆಸಲಾಗಿದೆ ಎನ್ನುವುದು ಸ್ಪಷ್ಯವಾಗಿಲ್ಲ. ಆದರೆ, ಆಕೆಯ ಖಾಸಗಿ ಭಾಗದಲ್ಲಿ ದೌರ್ಜನ್ಯ ನಡೆದಿರುವ ಬಗ್ಗೆ ಕುರುಹುಗಳು ಇಲ್ಲ. ಆದರೆ, ಶಿಕ್ಷಕಿ ಬಾಲಕಿಗೆ ದಂಡಿಸುವ ಭರದಲ್ಲಿ ಖಾಸಗಿ ಜಾಗದಲ್ಲಿ ಹಲ್ಲೆ ನಡೆಸಿರಬಹುದು ಎಂದು ಹೇಳಲಾಗಿದೆ. ಆದರೆ, ಬಾಲಕಿ ಕೌನ್ಸಿಲಿಂಗ್ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪ ಸಾಬೀತು ಪಡಿಸಿದರೆ ರಾಜಿನಾಮೆ
ಬೆಳಗಾವಿ: ತಮ್ಮ ವಿರುದ್ಧದ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಚೆನ್ನಾಗಿದೆ. ತಮ್ಮ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಬಿಜೆಪಿಯವರು ವಿನಾಕಾರಣ ಸರ್ಕಾರದ ವಿರುದ್ಧ ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ಮಾಡಲು ಸಾರ್ವಜನಿಕರು ಬಡಿಗೆಗಳನ್ನು ತೆಗೆದುಕೊಂಡು ಹೋಗಬೇಕೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವ ವಿಚಾರವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದ್ದೇ ಇದೆ. ಆದರೆ, ಯಾರಾದರೂ ಕಾನೂನನ್ನು ಕೈಗೆ ಎತ್ತಿಕೆಡರೆ, ಅಂತವರ ವಿರುದ್ಧ ಯಾವುದೇ ಮೂಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇವುಗಳನ್ನು ತಡೆಯಲು ಸೂಕ್ತ ಕ್ರಮ ಕೈ ಗೊಳ್ಳಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಕಠಿಣ ಕಾನೂನು ಇದೆ. ಲೈಂಗಿಕ ದೌರ್ಜನ್ಯ ಪ್ರಕರಣ ತಡೆ ಕುರಿತು ಪೊಲೀಸ್ ಇಲಾಖೆ ವತಿಯಿಂದ ಜನಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕೆಎಟಿ ಬೇಡಿಕೆಗೆ ಬೆಂಬಲ
ಬೆಳಗಾವಿಯಲ್ಲೇ ಆಡಳಿತಾತ್ಮಕ ನ್ಯಾಯ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ವಕೀಲರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು, ನಿಮ್ಮ ಹೋರಾಟ ನ್ಯಾಯಯುತವಾಗಿದ್ದು, ಅದಕ್ಕೆ ನನ್ನ ಬೆಂಬಲವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು. ವಕೀಲರ ಹೋರಾಟ ಏಳು ದಿನ ಪೂರೈಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com