ಪಾಟ್ನಾ: ಬಿಜೆಪಿ ಹಿರಿಯ ನಾಯಕ ಶ್ರೀಕಾಂತ್ ಭಾರತಿ ಅವರನ್ನು ಶೂಟೌಟ್ ಮಾಡಿದ್ದ ಪೊಲೀಸರ ಕ್ರಮದ ವಿರುದ್ಧ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ಮದುವೆಗೆ ಹೋಗಿ ಹಿಂತಿರುಗಿ ಮನೆಗೆ ಬರುವಾಗ ಸಿವಾನ್ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿ ಎಂದು ತಿಳಿದು ಬಿಜೆಪಿಯ ಹಿರಿಯ ನಾಯಕ ಶ್ರೀಕಾಂತ್ ಭಾರತಿ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಪೊಲೀಸರ ಈ ಅವಿವೇಕಿತನದ ಕೆಲಸಕ್ಕೆ ಅಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಬಿಹಾರದಾದ್ಯಂತ ರಸ್ತೆಗಳನ್ನು ತಡೆಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಅಲ್ಲದೇ ಬಿಹಾರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಶ್ರೀಕಾಂತ್ ಭಾರ್ತಿ ಬಿಜೆಪಿಯ ಹಿರಿಯ ನಾಯಕರಾಗಿದ್ದು 2010 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಲ್ಲದೇ ಬಿಜೆಪಿ ಸಂಸದ ಓಂ ಪ್ರಕಾಶ್ ಯಾದವ್‌ರವರ ವಿಶ್ವಾಸನೀಯ ಸಂಸದರಾಗಿದ್ದರು. ಹತ್ಯೆ ಕುರಿತಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಶ್ರೀಕಾಂತ್ ಅವರ ಕುಟುಂಬ ಸದಸ್ಯರು ಇದೊಂದು ರಾಜಕೀಯ ಪ್ರೇರಿತ ಹತ್ಯೆಯೆಂದು ಆರೋಪಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

