
ಕಾಠ್ಮಂಡು: ಸಾರ್ಕ್ ರಾಷ್ಟ್ರಗಳ 18ನೇ ಶೃಂಗದಲ್ಲಿ ಮುಂಬೈ ದಾಳಿ ವಿಚಾರ ಪ್ರಸ್ತಾಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ತೀವ್ರ ಮುಜುಗರ ಉಂಟು ಮಾಡಿದರು.
ಉತ್ತಮ ನೆರೆಹೊರೆ ಎಲ್ಲರ ಬಯಕೆ. ಒಂದು ವೇಳೆ ಭದ್ರತೆ ಹಾಗೂ ಜನರ ಜೀವದ ಕುರಿತು ಪರಸ್ಪರ ಕಾಳಜಿ ಹೊಂದಿದ್ದರೆ ನಮ್ಮ ನಡುವಿನ ಸ್ನೇಹ ಗಟ್ಟಿಯಾಗುತ್ತದೆ. ಪರಸ್ಪರ ಸಹಕಾರ ಮತ್ತು ಸ್ಥಿರತೆಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿ ನೇರವಾಗಿಯೇ ಪಾಕಿಸ್ತಾನರ್ಕೆ ಟಾಂಗ್ ನೀಡಿದರು.
ಮುಂಬೈ ದಾಳಿಯ ಆರನೇ ವರ್ಷಾಚರಣೆ ದಿನವಾದ ಬುಧವಾರವೇ ಆರಂಭವಾದ ಈ ಶೃಂಗವನ್ನು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬಳಸಿಕೊಂಡ ಮೋದಿ, ಯಾವುದೇ ದೇಶದ ಹೆಸರೆತ್ತದೆಯೇ ಪಾಕ್ ಪ್ರಧಾನಿ ನವಾಜ್ ಷರೀಫ್ ಮುಖ ಕೆಂಪಗಾಗಿಸಿದರು. ಭಯೋತ್ಪಾದನೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲಭೂತ ಸವಾಲು ಎನ್ನುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಅಭಿಪ್ರಾಯಕ್ಕೆ ದನಿಗೂಡಿಸಿ ಮಾತನಾಡಿದ ಮೋದಿ, ಉಗ್ರವಾದ ಹಾಗೂ ಅಂತಾರಾಷ್ಟ್ರೀಯ ಅಪರಾಧಕ್ಕೆ ಕೊನೆ ಹಾಡಲು ಸಂಘಟಿತ ಪ್ರಯತ್ನದ ಅಗದ್ಯವಿದೆ. ಈ ವಿಚಾರದಲ್ಲಿ ಸಾರ್ಕ್ ರಾಷ್ಟ್ರಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದರು. ಸಾರ್ಕ್ ವೇದಿಕೆಯಲ್ಲಿ ಮುಂಬೈ ದಾಳಿ ವಿಚಾರ ಪ್ರಸ್ತಾಪ ಮೋದಿ ಮತ್ತು ಷರೀಫ್ ಭೇಟಿಯ ಮೇಲೂ ಪರಿಣಾಮ ಬೀರಿತು. ಒಂದು ಹಂತದಲ್ಲಿ ಮುಜುಗರಕ್ಕೊಳಗಾದ ಷರೀಫ್ ಭಾರತದ ಪ್ರಧಾನಿ ಜತೆಗೆ ಮುಖಾಮುಖಿ ಆಗುವುದರಿಂದ ದೂರವೇ ಉಳಿದರು. ಜತೆಗೆ, ಭಾರತ ಪ್ರಸ್ತಾಪಿಸಿದ್ದ ಮೂರು ಪ್ರಮುಖ ಒಪ್ಪಂದಗಳಿಗೆ ಅಂಕಿತ ಬೀಳದಂತೆ ನೋಡಿಕೊಂಡರು.
ಪಾಕ್ ಮೌನ
ಮುಂಬೈ ದಾಳಿಯ ಆರನೇ ವರ್ಷಾಚರಣೆ ನೆನಪು ಮುಂದು ಮಾಡಿಕೊಂಡು ಮೋದಿ ಅವರು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದರೂ ಅದೇ ವೇದಿಕೆಯಲ್ಲಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಮಾತ್ರ ಈ ವಿಚಾರದಲ್ಲಿ ಮೌನವಾಗಿಯೇ ಉಳಿದರು. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾದಂಥ ರಾಷ್ಟ್ರಗಳ ಮುಖಂಡರು ತಮ್ಮ ಭಾಷಣದಲ್ಲಿ ಭಯೋತ್ಪಾದನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರೂ ಷರೀಫ್ ಭಾಷಣ ಬಡತನ ಮತ್ತು ಅಭಿವೃದ್ಧಿಗಷ್ಟೇ ಸಿಮೀತವಾಗಿತ್ತು.
ಮೋದಿ ಘೋಷಣೆ
* ಭಾರತ ಸಾರ್ಕ್ ರಾಷ್ಟ್ರಗಳಿಗೆ ಮೂರರಿಂದ ಐದು ವರ್ಷವರೆಗಿನ ಬ್ಯುಸಿನೆಸ್ ವೀಸಾ ನೀಡಲಿದೆ.
* ಟಿಬಿ ಮತ್ತು ಎಚ್‌ಐವಿಗಾಗಿ ಸಾರ್ಕ್ ಪ್ರಾದೇಶಿಕ ಸುಪ್ರ ರೆಫರೆನ್ಸ್ ಲ್ಯಾಬೋರೇಟರಿ ಆರಂಭಿಸಲು ಕೊರತೆಯಾಗುವ ನಿಧಿ, ದಕ್ಷಿಣ ಏಷ್ಯಾದ ಮಕ್ಕಳಿಗೆ ಫೈವ್-ಇನ್-ಒನ್ ಚುಚ್ಚು ಮದ್ದು, ಪೊಲೀಯೋ ಮುಕ್ತ ದೇಶಗಳಲ್ಲಿ ಪರಿಶೀಲನೆ ಮತ್ತು ಅಲ್ಲೇನಾದರೂ ಪೊಲೀಯೋ ಮರುಕಳಿಸಿದರೆ ಅಗತ್ಯ ಲಸಿಕೆ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುವ ರೋಗಿಗಳಿಗೆ ತುರ್ತು ವೈದ್ಯಕೀಯ ವೀಸಾ.
* ಸಾರ್ಕ್ ರಾಷ್ಟ್ರಗಳಿಗೆ ಪ್ರತ್ಯೇಕ ಉಪಗ್ರಹದ ಉಡಾವಣೆ ಪ್ರಸ್ತಾಪ. ಈ ಮೂಲಕ ಶಿಕ್ಷಣ, ಟೆಲಿಮೆಡಿಸಿನ್, ಹವಾಮಾನ ಮುನ್ನೆಚ್ಚರಿಕೆ, ಸಂವಹನ ಕ್ಷೇತ್ರದಲ್ಲಿ ಸದಸ್ಯ ರಾಷ್ಟ್ರಗಳಿಗೆ ಅನುಕೂಲ ಮಾಡಿಕೊಡುವ ಗುರಿ.
ಪರಸ್ಪರ ಮುಖ ನೋಡದ ಮೋದಿ-ಷರೀಫ್!
ಮೋದಿ ಮತ್ತು ಷರೀಫ್ ಸಾರ್ಕ್ ಶೃಂಗದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಕನಿಷ್ಠ ಮುಖವನ್ನೂ ನೋಡಲು ಮುಂದಾಗಲಿಲ್ಲ. ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಪರಸ್ಪರ ಔಪಚಾರಿಕವಾಗಿಯೂ ಗೌರವ ಸೂಚಿಸಲಿಲ್ಲ. ಭಾಷಣ ಮಾಡುವಾಗ ಪರಸ್ಪರ ಮುಖವನ್ನೂ ನೋಡಲಿಲ್ಲ. ಇದರಿಂದ ಶೃಂಗದಲ್ಲಿ ಈ ಎರಡೂ ನಾಯಕರ ನಡುವೆ ಅನೌಪಚಾರಿಕ ಮಾತುಕತೆ ನಡೆಯುವ ನಿರೀಕ್ಷೆಯೂ ಸುಳ್ಳಾಗುವ ಸಾಧ್ಯತೆ ಇದೆ.
Advertisement