
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಸಾಫ್ಟ್ ವೇರ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಗುರುವಾರ ನಡೆದಿದೆ.
ಆದರೆ, ಘಟನೆಗೂ ಮುನ್ನ ಸ್ಥಳೀಯರು ಹಾಗೂ ಪೊಲೀಸರು ಆತನ ಮನವೊಲಿಸಲು ಸುಮಾರು 2 ಗಂಟೆ ಕಾಲ ಹರಸಾಹಸ ಮಾಡಿದರು. ಆದರೂ ಪ್ರಯೋಜನವಾಗಲಿಲ್ಲ.
ಮೂಲತಃ ಉತ್ತರಪ್ರದೇಶದ ರಾಜೇಶ್ ಚೌಧರಿ (28) ಆತ್ಮಹತ್ಯೆ ಮಾಡಿಕೊಂಡವನು. ಬಾಣಸವಾಡಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಆತ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.
ಗುರುವಾರ ಬೆಳಿಗ್ಗೆ ಸಿಂಗಸಂದ್ರದ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಅಲ್ಲಿನ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಆತ ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದ. ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ರಾಜೇಶ್ ಬೆಳಿಗ್ಗೆ ಸುಮಾರು 7.20ರ ವೇಳೆಗೆ ಕಟ್ಟಡದ ಸಮೀಪ ಬಂದು ಏಕಾಏಕಿ ಮಹಡಿ ಮೇಲೆ ಹೋಗಿದ್ದಾನೆ. ಆಗ ಅಲ್ಲಿದ್ದ ಕಾರ್ಮಿಕರು ಪ್ರಶ್ನಿಸಿದ್ದಾರೆ. ಅವರಿಗೆ ಪ್ರತಿಕ್ರಿಯಿಸದ ಆತ ಯಾರಾದರೂ ಹತ್ತಿರ ಬಂದರೆ ಕೆಳಗೆ ಬೀಳುವುದಾಗಿ ಹೆದರಿಸಿದ್ದಾನೆ.
ಹೆದರಿದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 8.30ರ ವೇಳೆಗೆ ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಆತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಸುಮಾರು 9.30ರ ವೇಳೆಗೆ ಆತ ಕಟ್ಟಡದಿಂದ ಜಿಗಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾನೆ.
Advertisement