ಸಿಬಿಐ ಮುಖ್ಯಸ್ಥರ ನೇಮಕ ವಿಧೇಯಕಕ್ಕೆ ಸಂಸತ್ ಒಪ್ಪಿಗೆ

ಹಾಲಿ ಸಿಬಿಐ ನಿರ್ದೇಶಕರ ನಿವೃತ್ತಿಗೆ ಇನ್ನೇನು ಆರು ದಿನ ಬಾಕಿ...
ಅರುಣ್‌ಜೇಟ್ಲಿ
ಅರುಣ್‌ಜೇಟ್ಲಿ

ನವದೆಹಲಿ: ಹಾಲಿ ಸಿಬಿಐ ನಿರ್ದೇಶಕರ ನಿವೃತ್ತಿಗೆ ಇನ್ನೇನು ಆರು ದಿನ ಬಾಕಿ ಇರುವಾಗಲೇ ವಿವಾದಾತ್ಕ ದೆಹಲಿ ಪೊಲೀಸ್ ಸಂಸ್ಥೆ (ತಿದ್ದುಪಡಿ) ವಿಧೇಯಕಕ್ಕೆ ಸಂಸತ್ತಿನ ಅಂಗೀಕಾರ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ಈ ವಿಧೇಯಕದಂತೆ ಮುಂದಿನ ಸಿಬಿಐ ನಿರ್ದೇಶಕರ ಆಯ್ಕೆ ವೇಳೆ ಆಯ್ಕೆ ಸಮಿತಿಯಲ್ಲಿರುವ ಮೂವರೂ ಸದಸ್ಯರು ಹಾಜರಿರುವುದು ಕಡ್ಡಾಯವಲ್ಲ. ಸಿಬಿಐ ನಿರ್ದೇಶಕರ ಆಯ್ಕೆ ವೇಳೆ ಪ್ರತಿಪಕ್ಷ ನಾಯಕನ್ನು ಮೂಲೆಗುಂಪು ಮಾಡುವ ಉದ್ದೇಶದಿಂದಲೇ ಸರ್ಕಾರ ಈ ತಿದ್ದಪಡಿ ವಿಧೇಯಕ ಮಂಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಈ ವಿಧೇಯಕವನ್ನು ಬೆಂಬಲಿಸಿ ರಾಜ್ಯ ಸಭೆಯಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್‌ಜೇಟ್ಲಿ, ಆಯ್ಕೆ ಸಮಿತಿಯಲ್ಲಿರುವ ಪ್ರಧಾನಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಪ್ರತಿಪಕ್ಷ ನಾಯಕ ಇವರಲ್ಲಿ ಒಬ್ಬ ಸದಸ್ಯರು ಗೈರು ಹಾಜರಾದರೂ ಸಿಬಿಐ ನಿರ್ದೇಶಕರ ನೇಮಕ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಬುಧವಾರ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿತ್ತು.

ತೆರಿಗೆ ವ್ಯವಸ್ಥೆ ಸುಧಾರಣೆ: ಜೇಟ್ಲಿ

ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲು ಭಾರತದಲ್ಲಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಲು ಸರ್ಕಾ ಹೊರಟಿದೆ. ವಿವಿಧ ತೆರಿಗೆಗಳಿಂದಾಗಿ ಹೊರ ದೇಶಗಳಲ್ಲಿ ಭಾರತದ ಕುರಿತು ಹೂಡಿಕೆದಾರರದಲ್ಲಿ ಮೂಡಿದ್ದ ಋುಣಾತ್ಮಕ ಭಾವನೆ ತೊಡೆದು ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕಪ್ಪುಹಣಕ್ಕೆ ಸಂಬಂಧಿಸಿದ ಚರ್ಚೆವೇಳೆ ಅರುಣ್‌ಜೇಟ್ಲಿ ಲೋಕಸಭೆಗೆ ತಿಳಿಸಿದ್ದಾರೆ.

ಹೆಚ್ಚಿನ ತೆರಿಗೆದರದಿಂದ ಹೆಚ್ಚಿನ ಆದಯ ಸಂಗ್ರಹವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ನೇರ ಮತ್ತು ಪರೋಕ್ಷ ತೆರಿಗೆದರವನ್ನು ಸಮುಚಿತ ಹಂತಕ್ಕೆ ತರಬೇಕು. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಆದಾಯ ಖೋತಾ ಆಗದಂತೆಯೂ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಆಗ ಕಪ್ಪು ಕೊಡೆ, ಈಗ ಕಪ್ಪು ಶಾಲು: ಕಪ್ಪುಹಣಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ತೃಣಮೂಲ ಕಾಂಗ್ರೆಸ್ ತೀವ್ರಗೊಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಕಪ್ಪು ಕೊಡೆ ಪ್ರದಶಇರ್ಸಿದ್ದ ಪಕ್ಷದ ಸದಸ್ಯರು ಗುರುವಾರ ಕಪ್ಪು ಶಾಲು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಈ ವರ್ತನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

100 ದಿನದಲ್ಲಿ ಹಣ ತರುತ್ತೇವೆ ಎಂದು ಹೇಳಿಯೇ ಇಲ್ಲ: ನಾಯ್ಡು


100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇವೆ ಎಂದು ನಾವು ಹೇಳಿಯೇ ಇಲ್ಲ. ಆ ರೀತಿ ಹೇಳುವಷ್ಟು ಅಪ್ರಬುದ್ಧರಲ್ಲ ನಾವು ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಲೋಕಸಭೆಗೆ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ 100 ದಿನದಲ್ಲಿ ಕಪ್ಪು ಹಣ ವಾಪಸ್ ತರಲಾಗುತ್ತದೆ ಎನ್ನುವ ಭರವಸೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯೆಯಾಗಿ ನಾಯ್ಡು ಈ ಉತ್ತರ ನೀಡಿದ್ದಾರೆ.

ಅಧಿಕಾರಕ್ಕೆ ಬಂದರೆ ಕಪ್ಪು ಹಣ ವಾಪಸ್ ತರಲು ಟಾಸ್ಕ್ ಪೋರ್ಸ್ ರಚಿಸುತ್ತೇವೆ ಹಾಗೂ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತೇವೆ ಎಂದಷ್ಟೇ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com