ವಿಶ್ವ ವ್ಯಾಪಾರ ಸಂಸ್ಥೆ
ವಿಶ್ವ ವ್ಯಾಪಾರ ಸಂಸ್ಥೆ

ವಿಶ್ವ ವ್ಯಾಪಾರ: ಐತಿಹಾಸಿಕ ಡೀಲ್ ಕುದುರಿಸಿದ ಡಬ್ಲ್ಯುಟಿಒ

ಜಿನೇವಾ: ವಿಶ್ವ ವ್ಯಾಪಾರಕ್ಕೆ ಸಂಬಂಧಿಸಿ ಮೊದಲ ಮಹತ್ವದ ಒಪ್ಪಂದ ಕುದುರಿಸುವಲ್ಲಿ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಸಿ) ಯಶಸ್ವಿಯಾಗಿದೆ.

ವಿಶ್ವ ವ್ಯಾಪಾರ ನೀತಿಗೆ ಸಂಬಂಧಿಸಿದ ಮೊದಲ ಸುಧಾರಣಾ ಕ್ರಮಗಳಿಗೆ ವಿಶ್ವ ವ್ಯಾಪಾರ ಸಂಸ್ಥೆ ಗುರುವಾರ ಅಂಗೀಕಾರ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವ ವ್ಯಾಪಾರಕ್ಕೆ ಸಂಬಂಧಿಸಿ ಸುಧಾರಣಾ ಕ್ರಮವೊಂದನ್ನು ಅನುಷ್ಠಾನಕ್ಕೆ ತರಲು ಡಬ್ಲ್ಯುಟಿಒಗೆ ಸಾಧ್ಯವಾಗಲಿದೆ.

ಈ ಒಪ್ಪಂದದಿಂದಾಗಿ ಸೀಮಾ ತಪಾಸಣೆಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿ ಗಡಿ ತಪಾಸಣಾ ಪ್ರಕ್ರಿಯೆಯಲ್ಲಿ ವಿಶ್ವಾದ್ಯಂತ ಇನ್ನು ಮುಂದೆ ಏಕರೀತಿಯ ನಿಯಮಾವಗಳಿಗಳನ್ನು ಅನುಷ್ಠಾನಕ್ಕೆ ತರುವುದು ಡಬ್ಲ್ಯುಟಿಒಗೆ ಸಾಧ್ಯವಾಗಲಿದೆ. ಇದು ವಿಶ್ವಾದ್ಯಂತ ವ್ಯಾಪಾರದ ಹರಿವನ್ನು ಸರಳಗೊಳಿಸಲಿದೆ. ಜತೆಗೆ, ವಿಶ್ವ ಆರ್ಥಿಕತೆಗೆ 1 ಲಕ್ಷ ಶತಕೋಟಿ ಡಾಲರ್ ಹರಿಯಲಿದ್ದು, 21 ದಶಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ.

19 ವರ್ಷದ ಹಿಂದಿನ ಡೀಲ್: ಈ ರೀತಿಯ ಒಪ್ಪಂದಕ್ಕಾಗಿ ಡಬ್ಲ್ಯುಟಿಒ ಸುಮಾರು 19 ವರ್ಷಗಳಿಂದ ಪ್ರಯತ್ನ ನಡೆಸುತ್ತಿತ್ತು. ಈ ಒಪ್ಪಂದ 2001ರ ದೋಹಾ ಸುತ್ತಿನ ಮಾತುಕತೆಯ ಒಂದು ಭಾಗವಷ್ಟೇ. ದೋಹ ಮಾತುಕತೆಯ ವೇಳೆಗೆ ಚರ್ಚೆಗೆ ಬಂದ ಮೂಲ ಒಪ್ಪಂದದ ಅನುಷ್ಠಾನ ಅಸಾಧ್ಯ ಎನ್ನುವ ಸ್ಥಿತಿ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಮೂಲ ಒಪ್ಪಂದವನ್ನು ಕಿರಿದುಗೊಳಿಸಿ ನಂತರ ವಿಶ್ವ ರಾಷ್ಟ್ರಗಳ ಮುಂದಿಡಲಾಗಿತ್ತು. ಆದರೆ, ಭಾರತದ ನೇತೃತ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಒಪ್ಪಂದ ಜಾರಿಗೆ ಬಂದರೆ ತನ್ನ ಆಹಾರ ಭದ್ರತಾ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಆರೋಪಿಸಿ ಕಳೆದ ಜುಲೈನಲ್ಲಿ ಈ ಒಪ್ಪಂದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು, ಆದರೆ, ನ. 13ರಂದು ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಮೂಲಕ ಡಬ್ಲ್ಯುಟಿಒನ ಈ ಮಹತ್ವದ ಒಪ್ಪಂದಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿತ್ತು.

ಮುಂದೇನು?
ಈ ಒಪ್ಪಂದ ಕುರಿತು ಇನ್ನು ಮುಂದೆ ವಿಶ್ವ ವ್ಯಾಪಾರ ಒಕ್ಕೂಟದ ದೇಶಗಳು ವೈಯಕ್ತಿಕ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಬೇಕಿದೆ. ಈ ಕಾರ್ಯ ಮುಂದಿನ ವರ್ಷದಿಂದ ಆರಂಭವಾಗಲಿದೆ. 1995ರಲ್ಲಿ ಅಸ್ವಿತ್ವಕ್ಕೆ ಬಂದ ಬಳಿಕ ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ ಪ್ರಮುಖ ಒಪ್ಪಂದ ಇದಾಗಿದೆ.

ಭಾರತದ ಕಳವಳಕ್ಕೆ ಬೆಲೆ
ಆಹಾರ ಸಬ್ಸಿಡಿಗೆ ಸಂಬಂಧಿಸಿ ಈ ಒಪ್ಪಂದದಲ್ಲಿದ್ದ ಪೀಸ್ ಕ್ಲಾಸ್‌ಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಭಾರತದ ಬೇಡಿಕೆಯಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಪೀಸ್ ಕ್ಲಾಸ್ ಅನ್ನು ವಿಸ್ತರಿಸಲು ಡಬ್ಲ್ಯುಟಿಒ ಒಪ್ಪಿಕೊಂಡಿದೆ. ಬಾಲಿ ಒಪ್ಪಂದದ ಪ್ರಕಾರ ಪೀಸ್ ಕ್ಲಾಸ್ 2017ರವರೆಗಷ್ಟೇ ಮುಂದುವರಿಯಬೇಕು. ಆದರೆ, ಈಗ ಈ ಕ್ಲಾಸ್ ಅನ್ನು ಮುಂದುವರಿಸಲು ಡಬ್ಲ್ಯುಟಿಒ ಒಪ್ಪಿದ್ದರಿಂದ ಆಹಾರ ಭದ್ರತಾ ಯೋಜನೆ ಮುಂದುವರಿಸಲು ಭಾರತಕ್ಕೆ ಅವಕಾಶ ನಿಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com