
ನೋಯ್ಡಾ: ಅಬ್ಬಬ್ಬಾ... ಇವನನ್ನು ನೋಡಿದರೆ ದೇಶದ ಭ್ರಷ್ಟ ರಾಜಕಾರಣಿಗಳೂ ನಾಚಿ ತಲೆತಗ್ಗಿಸಬೇಕು. ಅಂತಹಾ 'ಮಹಾನುಭಾವ' ಈತ!
ಹೆಸರಿಗೆ ಕೇವಲ ಎಂಜಿನಿಯರ್ ಅಷ್ಟೆ. ಆದ್ರೆ ಈತ ಮಾಡಿದ ಆಸ್ತಿ-ಪಾಸ್ತಿ ಅಷ್ಟಿಷ್ಟಲ್ಲ. ಬರೋಬ್ಬರಿ 20 ಬಾರಿ ದಾಳಿ ನಡೆಸಿದರೂ ಆದಾಯ ತೆರಿಗೆ ಇಲಾಖೆಯವರಿಗೆ ಇವನ ಬಳಿಯಿರುವ ಒಟ್ಟು ಆಸ್ತಿಯೆಷ್ಟು ಎಂದು ಅಂದಾಜಿಸಲೂ ಸಾಧ್ಯವಾಗಿಲ್ಲ. ಹಾಗಿದ್ದರೆ ಇವನೆಂಥಾ ಬ್ರಹ್ಮಾಂಡ ಭ್ರಷ್ಟಾಚಾರಿ ಇರಬಹುದು ನೀವೇ ಯೋಚಿಸಿ.
ಉತ್ತರ ಪ್ರದೇಶದ ನೋಯ್ಡಾ ಪ್ರಾಧಿಕಾರದ ಎಂಜಿನಿಯರ್ ಯಾದವ್ ಸಿಂಗ್‌ನ ಅಕ್ರಮ ಸಾಮ್ರಾಜ್ಯ ಇದೀಗ ಸರ್ವನಾಶವಾಗುವ ಹಂತಕ್ಕೆ ಬಂದಿದೆ. ಶುಕ್ರವಾರ ಯಾದವ್ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಒಂದಲ್ಲ ಎರಡಲ್ಲ, ಬರೋಬ್ಬರಿ ರು.10 ಸಾವಿರ ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಈತನ ಪಾಪದ ಕೊಡ ತುಂಬಿದ್ದು, ಇವನ ವಿರುದ್ಧ ಸಿಬಿಐ ತನಿಖೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
ರು.50 ಕೋಟಿ ಕೊಡುತ್ತೇನೆಂದ!
ಶುಕ್ರವಾರ ಐಟಿ ಅಧಿಕಾರಿಗಳು ಯಾದವ್ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಂತೆ, ಅಲ್ಲಿ ಸಿಕ್ಕಿದ್ದ ರು.10 ಕೋಟಿ ನಗದು, ರು.100 ಕೋಟಿ ಮೌಲ್ಯದ ವಜ್ರಾಭರಣ, ರು.90 ಲಕ್ಷ ಮೌಲ್ಯದ ಆಡಿ ಕಾರು. ಇದನ್ನೆಲ್ಲ ವಶಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾದಾಗ ಸುಮ್ಮನಿರದ ಯಾದವ್, ನಿಮಗೆ ರು.50 ಕೋಟಿ ನೀಡುತ್ತೇನೆ ಎಂಬ ಆಮಿಷವನ್ನೂ ಒಡ್ಡಿದನಂತೆ. ಆದರೆ ಅಧಿಕಾರಿಗಳು ನಿಷ್ಠಾವಂತರಾಗಿದ್ದ ಕಾರಣ ಈತನ ಕೊಡುಗೆಯನ್ನೂ ಸಾರಾಸಗಟಾಗಿ ತಿರಸ್ಕರಿಸಿದರು.
ಪತ್ನಿ ಹೆಸರಲ್ಲಿ 40 ನಕಲಿ ಕಂಪನಿಗಳು
ನೋಯ್ಡಾ, ಗಾಜಿಯಾಬಾದ್ ಮತ್ತು ದೆಹಲಿಯಲ್ಲಿರುವ 20 ಕಟ್ಟಡಗಳ ಮೇಲೆ ಸುಮಾರು 100 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇನ್ನೂ ಕೆಲವು ದಿನಗಳ ಕಾಲ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದವ್ ಪತ್ನಿ ಕುಸುಮಲತಾ ಹೆಸರಲ್ಲಿ ಸುಮಾರು 40 ನಕಲಿ ಕಂಪನಿಗಳಿರುವುದೂ ಬೆಳಕಿಗೆ ಬಂದಿದೆ. ಯಾದವ್ ಮತ್ತು ಆತನ ಸಹಚರರ 13 ಲಾಕರ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತನ ಹಗರಣದ ಮೊತ್ತ ರು.900 ಕೋಟಿ ದಾಟಿರಬಹುದೆಂದು ಅಂದಾಜಿಸಲಾಗಿದೆ.
ಮತ್ತೆ ಬಂದ 'ಬೆಹನ್‌ಜೀಸ್ ನವರತ್ನ'
ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರಿಗೆ ಯಾದವ್ ತುಂಬಾ ಆತ್ಮೀಯ. ಹಾಗಾಗಿ ಆತನನ್ನು 'ಬೆಹನ್‌ಜೀಸ್ ನವರತ್ನ' ಎಂದೇ ಕರೆಯಲಾಗುತ್ತಿತ್ತು. ಹೀಗಾಗಿಯೇ ಈತನ ವಿರುದ್ಧ ಕ್ರಮ ಕೈಗೊಳ್ಳುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿತ್ತು. ಆದರೆ 2012ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಯಾದವ್‌ಗೆ ಸಂಕಷ್ಟ ಶುರುವಾಯಿತು. ಈತನನ್ನು ಅಮಾನತು ಮಾಡಿದ ಎಸ್ಪಿ ಸರ್ಕಾರ, ತನಿಖೆಗೆ ಆದೇಶಿಸಿತು. ವಿಷಯ ತಿಳಿಯುತ್ತಿದ್ದಂತೆ ಯಾದವ್ ವಿದೇಶಕ್ಕೆ ಹಾರಿದ. ಇವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಯಿತು. ಸ್ವಲ್ಪ ದಿನಗಳ ನಂತರ ನೋಟಿಸ್ ವಾಪಸ್ ಪಡೆಯಲಾಯಿತು. ತನಿಖೆಯೂ ಆಮೆಗತಿಯಲ್ಲಿ ಸಾಗಿತು. ನ.2013ರಲ್ಲಿ ಅಮಾನತು ಆದೇಶವನ್ನೂ ವಾಪಸ್ ಪಡೆಯಲಾಯಿತು. ಅಷ್ಟೇ ಅಲ್ಲ, ಅವನಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಪ್ರಾಧಿಕಾರದಲ್ಲಿ ಪ್ರಮುಖ ಎಂಜಿನಿಯರ್ ಹುದ್ದೆಯನ್ನೂ ಕಲ್ಪಿಸಲಾಯಿತು.
Advertisement