
ನವದೆಹಲಿ: ಸಹರಾ ಹಗರಣದಲ್ಲಿ ಅಮಿತ್ ಶಾ ಅವರ ಹೆಸರನ್ನು ಸೇರಿಸಬೇಕೆಂದು ಒತ್ತಾಯಿಸಿ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಸಂಸತ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ ಸುಬ್ರತೊ ರಾಯ್ ಅವರ ಡೈರಿಯಲ್ಲಿ ಅಮಿತ್ ಶಾ ಅವರ ಹೆಸರು ಪ್ರಸ್ತಾಪವಾಗಿದ್ದು, ಹಗರಣದಲ್ಲಿ ಶಾ ಸಹ ಪಾಲ್ಗೊಂಡಿದ್ದಾರೆ ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಶಾ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದ ಟಿಎಂಸಿ ಸಂಸದರು, ಪ್ರಕರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಪ್ರಸ್ತುತ ಸಂಸತ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿರುವ ಟಿಎಂಸಿ ಕಾರ್ಯಕರ್ತರು ಪ್ರಕರಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಡಲೇ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಹರಾ ಗ್ರೂಪ್‌ನ ಹೂಡಿಕೆದಾರರಿಗೆ 24,000 ಕೋಟಿ ರು. ಹಿಂತಿರುಗಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ಫೆ.28 ರಂದು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಹರಾ ಸಂಸ್ಥೆಯ ಮುಖ್ಯಸ್ಥ ಸುಬ್ರತೊ ರಾಯ್ ಅವರನ್ನು ಪೋಲಿಸರು ಬಂಧಿಸಿದ್ದರು. ಪ್ರಕರಣದ ಕುರಿತು ಸಿಬಿಐ ತನಿಖೆ ಮುಂದುವರೆದಿದೆ.
Advertisement