
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಜನಾಂಗೀಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ಪಕ್ಷ ಮುಖ್ಯಸ್ಥೆ ಸೋನಿಯಾ ಗಾಂಧಿ ಮಾತ್ರ, ಸಂಕುಚಿತ ಬುದ್ಧಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಈ ಮಧ್ಯೆ, ವಿವಾದಾತ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಷಾದ ವ್ಯಕ್ತಪಡಿಸಿರುವ ಗಿರಿರಾಜ್ ಸಿಂಗ್ಸ ನನ್ನ ಹೇಳಿಕೆಯಿಂದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನೋವಾಗಿದ್ದರೆ, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ್ದ ಗಿರಿರಾಜ್ ಸಿಂಗ್, ರಾಜೀವ್ ಗಾಂಧಿ ಅವರು ನೈಜೀರಿಯಾಗೆ ಸೇರಿದ ಹೆಣ್ಣು ಮಗಳನ್ನು ಮದುವೆಯಾಗಿದ್ದರೆ, ಆ ಹೆಣ್ಣು ಮಗಳು ಬೆಳ್ಳಗಿರದಿದ್ದರೆ ಆಕೆಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸ್ಥಾನ ನೀಡುತ್ತಿತ್ತೇ? ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದರು.
ಗಿರಿರಾಜ್ ಅವರ ಈ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ವಿರೋಧಕ್ಕೆ ವ್ಯಕ್ತವಾಗಿತ್ತಲ್ಲದೆ, ರಸ್ತೆಗಳಲ್ಲಿ ಪ್ರತಿಭಟನೆಗಿಳಿದು ಗಿರಿರಾಜ್ ಕ್ಷಮಾಪಣೆ ಕೋರುವಂತೆ ಆಗ್ರಹಿಸಿತ್ತು.
Advertisement