
ತಿರುವನಂತಪುರ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ 349 ಭಾರತೀಯರನ್ನು ಭಾರತಕ್ಕೆ ಕರೆ ತಂದ ಬೆನ್ನಲ್ಲೆ ಇದೀಗ ವಿಮಾನ ಹಾಗೂ ಹಡಗುಗಳ ಮೂಲಕ 1900 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆ ತರಲಾಗುತ್ತಿದೆ.
ವಿಮಾನ ಹಾಗೂ ಎರಡು ಭಾರತೀಯ ಹಡಗುಗಳ ಮೂಲಕ ಸುಮಾರು 1900 ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರಲಾಗುತ್ತಿದ್ದು, ಇಂದು ರಾತ್ರಿಗೆ ಕೊಚ್ಚಿಯಲ್ಲಿ ವಿಮಾನ ಭೂಸ್ಪರ್ಶ ಮಾಡಲಿದೆ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಹೇಳಿದ್ದಾರೆ.
ಮೂರು ಭಾರತೀಯ ವಿಮಾನಗಳು ಯೆಮೆನ್ ಗೆ ಹಾರಿದ್ದು, ಎರಡು ವಿಮಾನಗಳು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಮತ್ತೊಂದು ವಿಮಾನ ಕೊಚ್ಚಿಗೆ ಬರಲಿದೆ ಎಂದು ಮಾಹಿತಿ ಇರುವುದಾಗಿ ಹೇಳಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಉಮ್ಮನ್ ಚಾಂಡಿ ಪತ್ರದಲ್ಲಿ ಪಾಕಿಸ್ತಾನ, ರಷ್ಯಾ ಮತ್ತು ಚೀನಾ ರಾಷ್ಟ್ರಗಳು ತಮ್ಮ ರಾಷ್ಟ್ರದವರನ್ನು ಸುರಕ್ಷಿತವಾಗಿ ಕರೆಸಿಕೊಂಡಿದ್ದಾರೆ. ಇದೇ ರೀತಿ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಬೇಕೆಂಬ ಮನವಿ ಮಾಡಿದ್ದಾರೆ.
ಇದೇ ವೇಳೆ, ಯೆಮೆನ್ ನಲ್ಲಿ ಹೆಚ್ಚು ಮಂದಿ ಭಾರತೀಯರು ತಮ್ಮ ಸರ್ಟಿಫಿಕೇಟ್ ಹಾಗೂ ಪಾಸ್ ಪೋರ್ಟ್ ಸಿಗದೆ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇದರ ತೀವ್ರತೆ ಅರಿತು ಪ್ರಧಾನಿಗಳು ಯೆಮೆನ್ ಗೆ ಹೆಚ್ಚು ಮಂದಿ ಅಧಿಕಾರಿಗಳನ್ನು ಕಳುಹಿಸಿ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ಸ ತರಲು ಪ್ರಯತ್ನಿಸಬೇಕಿದೆ ಎಂದು ಸೂಚಿಸಿದ್ದಾರೆ.
Advertisement