
ನವದೆಹಲಿ: ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂಬ ಬಿಜೆಪಿ ಸಂಸದ ಶ್ಯಾಮ್ ಚರಣ್ ಗುಪ್ತಾ ಅವರ ವಿವಾದಾತ್ಮಕ ಹೇಳಿಕೆಗೆ ಸಾಥ್ ನೀಡಿರುವ ಮತ್ತೊಬ್ಬ ಬಿಜೆಪಿ ಸಂಸದ ರಾಮ್ ಪ್ರಸಾದ್ ಸರ್ಮಾಹ್ ಅವರು ಸಿಗರೇಟ್ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಕರವಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ಸಂಸದ ಶ್ಯಾಮ್ ಚರಣ್ ಗುಪ್ತಾ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ಮಾತನಾಡಿರುವ ಅಸ್ಸಾಂನ ಬಿಜೆಪಿ ಸಂಸದ ರಾಮ್ ಪ್ರಸಾದ್ ಸರ್ಮಾಹ್ ಅವರು, ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಾರೆ ಎಂಬುದಕ್ಕೆ ಈವರೆಗೂ ಯಾವುದೇ ದಾಖಲೆಗಳಿಲ್ಲ, (ಸರಣಿ ಧೂಮಪಾನ) ಚೇನ್ ಸ್ಮೋಕರ್ ಗಳಿಗೆ ಕ್ಯಾನ್ಸರ್ ಬರದಿರುವುದರ ಕುರಿತು ವೈದ್ಯರೇಕೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಬೀಡಿ, ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಪ್ಯಾಕೇಟ್ ಮೇಲೆ ಅಪಾಯದ ಎಚ್ಚರಿಕೆ ನೀಡುವ ದೊಡ್ಡ ಚಿತ್ರ ಹಾಕಿಕೊಳ್ಳಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಬಹುಕೋಟಿ ಮೌಲ್ಯದ ಬೀಡಿ ಉದ್ಯಮದ ಮಾಲೀಕ ಹಾಗೂ ತಂಬಾಕು ಉತ್ಪನ್ನ ಮಾರಾಟ ಸಂಬಂಧಿಸಿ ಲೋಕಸಭೆ ಸಮಿತಿ ಸದಸ್ಯರಾಗಿರುವ ಶ್ಯಾಮ್ ಚರಣ್ ಗುಪ್ತಾ ಸಕ್ಕರೆ ತಿಂದರೆ ಸಕ್ಕರೆ ಖಾಯಿಲೆ ಬರುತ್ತದೆ ಎಂದು ಸಕ್ಕರೆಯನ್ನೇ ನಿಷೇಧ ಮಾಡಲು ಸಾಧ್ಯವೇ...? ಸಕ್ಕರೆ, ಅಕ್ಕಿ, ಆಲೂಗಡ್ಡೆ ತಿನ್ನುವುದರಿಂದ ಮಧುಮೇಹ ಬರುತ್ತದೆ. ಹಾಗೆಂದು ಅದರ ಮೇಲೆ ಎಚ್ಚರಿಕೆ ಚಿಹ್ನೆ ಹಾಕುತ್ತೀರಾ ಎಂದು ಪ್ರಶ್ನಿಸಿದ್ದರಲ್ಲದೇ, ಸಿಗರೇಟ್ ಕ್ಯಾನ್ಸರ್ ಗೆ ಕಾರಣವಲ್ಲ. ಹಾಗೆ ನೋಡಿದರೆ ಸಕ್ಕರೆಗಿಂತ ಬೀಡಿಯೆ ಹೆಚ್ಚು ಸುರಕ್ಷಿತ ಎಂದು ಗುರುವಾರ ತಮ್ಮ ವಿತಂಡ ವಾದವನ್ನು ಮಂಡಿಸಿದ್ದರು.
ಗುಪ್ತಾ ಬಹುಕೋಟಿ ಮೌಲ್ಯದ ಬೀಡಿ ಉದ್ಯಮದ ಮಾಲೀಕರೂ ಆಗಿರುವುದರಿಂದ ತಂಬಾಕು ಉತ್ಪನ್ನದ ಉದ್ದಿಮೆಯ ಪರವಾಗಿ ವಾದ ಮಂಡಿಸುತ್ತಿದ್ದಾರೆ ಎನ್ನುವುದು ಇತರರ ಅಭಿಪ್ರಾಯವಾಗಿತ್ತು. ಶ್ಯಾಮ್ ಚರಣ್ ಬೀಡಿ ಉದ್ಯಮಿಯಾಗಿರುವುದರಿಂದ ತಂಬಾಕು ಮಾರಾಟಗಾರರ ಪರವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಹೇಳಿಕೆ ಮಾರಾಟಗಾರರಿಗೆ ಪ್ರಚಾರ ನೀಡಿದಂತಾಗುತ್ತದೆ. ಹಾಗಾಗಿ ಸಂಸದೀಯ ಸಮಿತಿಯಿಂದ ಶ್ಯಾಮ್ ಚರಣ್ ಗುಪ್ತಾ ಅವರನ್ನು ಕಿತ್ತುಹಾಕಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿತ್ತು.
Advertisement