

ನವದೆಹಲಿ: ಅಧಿಕಾರಕ್ಕೇರಿದ ಹೊಸದರಲ್ಲಿ ಹಿಂದಿನ ಸರ್ಕಾರದ ಸಮಿತಿಗಳನ್ನು ತೆಗೆದು ಹಾಕುವುದು ಹೊಸತೇನಲ್ಲ. ಹಾಲಿ ಸರ್ಕಾರ ಕೂಡ ಕಳೆದ ವರ್ಷದ ಮೇನಲ್ಲಿ ಯುಪಿಎ ರಚಿಸಿದ್ದ ಎಲ್ಲ ಸಮಿತಿಗಳನ್ನು ರದ್ದು ಮಾಡಿತ್ತು. ಆದರೆ 11 ತಿಂಗಳ ಬಳಿಕ ಹಾಲಿ ಸರ್ಕಾರ ಅನೌಪಚಾರಿಕವಾಗಿ 9 ಸಮಿತಿ ರಚಿಸಿದೆ. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ವಿಧೇಯಕದ ವರೆಗೆ ಹಲವು ವಿಚಾರಗಳ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಲು ಸಮಿತಿಗಳನ್ನು ರಚಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಾನೂನು ಬದ್ಧವಾಗಿರುವ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಸಚಿವರ ಸಮಿತಿ ರಚಿಸಲಾಗಿದೆ. ಸಚಿವೆ ಸುಷ್ಮಾ ಸ್ವರಾಜ್, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದ ಮತ್ತೊಂದು ಸಮಿತಿ ಏ.7ಕ್ಕೆ ಸಭೆ ಸೇರಲಿದೆ. ಅಂದ ಹಾಗೆ ವಿತ್ತ ಸಚಿವ ಜೇಟ್ಲಿ ನೇತೃತ್ವದಲ್ಲಿ 3 ಸಮಿತಿಗಳಿವೆ. ಕಳೆದ ತಿಂಗಳು ಐದು ಪ್ರಮುಖ ವಿಚಾರಗಳ ಬಗ್ಗೆ ನಿರ್ಧರಿಸಲು ಇದೇ ಅನೌಪಚಾರಿಕ ಸಮಿತಿಗಳಿಗೆ ಅಧಿಕಾರ ನೀಡಲಾಗಿತ್ತು.