ವಿವಾದಾತ್ಮಕ ಹೇಳಿಕೆ: ಪತ್ನಿ ಹೇಳಿಕೆಗೆ ಸಾಥ್ ನೀಡಿದ ಸಚಿವ ದೀಪಕ್ ಧವಲಿಕರ್

ಹೆಣ್ಣು ಮಕ್ಕಳು ಪಾಶ್ಚಿಮಾತ್ಯ ಶೈಲಿ ಬಟ್ಟೆ ತೊಡುವುದರಿಂದಲೇ ಅತ್ಯಾಚಾರ ಸಂಖ್ಯೆ ಹೆಚ್ಚುತ್ತಿದೆ ಎಂಬ ತಮ್ಮ ಪತ್ನಿಯ ವಿವಾದಾತ್ಮಕ ಹೇಳಿಕೆಗೆ ಸಾಥ್ ನೀಡಿರುವ ಗೋವಾ ಸಚಿವ ದೀಪಕ್ ಧವಲಿಕರ್ ಅವರು ನನ್ನ ಪತ್ನಿ...
ಗೋವಾ ಸಚಿವ ದೀಪಕ್ ಧವಲಿಕರ್
ಗೋವಾ ಸಚಿವ ದೀಪಕ್ ಧವಲಿಕರ್

ಪಣಜಿ: ಹೆಣ್ಣು ಮಕ್ಕಳು ಪಾಶ್ಚಿಮಾತ್ಯ ಶೈಲಿ ಬಟ್ಟೆ ತೊಡುವುದರಿಂದಲೇ ಅತ್ಯಾಚಾರ ಸಂಖ್ಯೆ ಹೆಚ್ಚುತ್ತಿದೆ ಎಂಬ ತಮ್ಮ ಪತ್ನಿಯ ವಿವಾದಾತ್ಮಕ ಹೇಳಿಕೆಗೆ ಸಾಥ್ ನೀಡಿರುವ ಗೋವಾ ಸಚಿವ ದೀಪಕ್ ಧವಲಿಕರ್ ಅವರು ನನ್ನ ಪತ್ನಿ ಹೇಳಿರುವ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.

ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಕಾರ್ಯನಿರ್ವಾಹಕರಲ್ಲೊಬ್ಬರಾಗಿರುವ ಗೋವಾ ಮಂತ್ರಿ ದೀಪಕ್ ಧವಲಿಕರ್ ಅವರ ಪತ್ನಿ ಲತಾ, ಭಾನುವಾರ ಮಾರ್ಗೋವಾದಲ್ಲಿ ನಡೆದ ಸಂಘಟನೆಯ ಸಮಾವೇಶವೊಂದರಲ್ಲಿ ಮಾತನಾಡಿ ಇಂದಿನ ಹೆಣ್ಣು ಮಕ್ಕಳು ಫ್ಯಾಷನ್ ಎಂಬ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪಾಲಿಸುತ್ತಿದ್ದು, ತುಂಡುಗೆಗಳು, ಬಿಗಿಯಾದ ಬಟ್ಟೆ ಹಾಗೂ ವಿಲಕ್ಷಣ ಕೇಶವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ಹೆಣ್ಣುಮಕ್ಕಳು ವಿದೇಶಿ ಸಂಸ್ಕೃತಿಗಳಿಗೆ ದಾಸರಾಗುತ್ತಿರುವುದರಿಂದಲೇ ಇಂದು ಮಹಿಳೆಯರ ಮೇಲಿನ ಅತ್ಯಾಚಾರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾನ್ವೆಂಟ್ ಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಪಾಲಕರು ಹೆಚ್ಚಿದ್ದು, ನಿಮ್ಮ ಮಕ್ಕಳನ್ನು ಕಾನ್ವೆಂಟ್ ಗಳಿಗೆ ಕಳುಹಿಸಬೇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪತ್ನಿಯ ಈ ವಿವಾದಾತ್ಮಕ ಹೇಳಿಕೆ ಕುರಿತಂತೆ ಇಂದು ಸಮರ್ಥನೆ ನೀಡಿರುವ ಗೋವಾ ಮಂತ್ರಿ ದೀಪಕ್ ಧವಲಿಕರ್ ಅವರು, ನನ್ನ ಪತ್ನಿ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಹೆಣ್ಣು ಮಕ್ಕಳು ತೊಡುವ ಬಟ್ಟೆಯಿಂದಲೇ ಇಂದು ಅತ್ಯಾಚಾರಗಳು ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಪಾಲಿಸುತ್ತಿದ್ದಂತಹ ಸಂದರ್ಭಗಳಲ್ಲಿ ಅತ್ಯಾಚಾರ ಸಂಖ್ಯೆಗಳಿರಲಿಲ್ಲ ಎಂದು ಹೇಳಿದ್ದಾರೆ.

ಇಂದು ಭಾರತದ ಯಾವುದೇ ಕಾನ್ವೆಂಟ್ ಹೋಗಿ ನೋಡಿ. ಅಲ್ಲಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿಗಿಂತಲೂ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಯಾಯಿಗಳೇ ಹೆಚ್ಚಿರುತ್ತಾರೆ. ಕಾನ್ವೆಂಟ್ ಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹೇಳಿಕೊಡುತ್ತಾರೆಯೇ? ಒಮ್ಮೆ ಕಾನ್ವೆಂಟ್ ಗೆ ಭೇಟಿ ನೀಡಿ ಪರಿಶೀಲಿಸಿ. ಸತ್ಯಾಂಶ ನಿಮಗೆ ತಿಳಿಯುತ್ತದೆ. ಭಾರತೀಯ ಸಂಸ್ಕೃತಿಯ ಬಗ್ಗೆ ಅಲ್ಲಿನ ಮಕ್ಕಳಿಗೆ ಯಾರೊಬ್ಬರೂ ಹೇಳಿಕೊಡುವುದಿಲ್ಲ. ನಮ್ಮ ಸಂಸ್ಕೃತಿಯ ಬಗ್ಗೆ ಅಲ್ಲಿನ ಮಕ್ಕಳಿಗೆ ಸಾಮಾನ್ಯ ಅರಿವೂ ಸಹ ಇರುವುದಿಲ್ಲ.

ವಿದೇಶೀ ಸಂಸ್ಕೃತಿಗೆ ಭಾರತೀಯರು ಹೆಚ್ಚು ಮರುಳಾಗುತ್ತಿರುವುದರಿಂದಲೇ ಇಂದಿನ ನಮ್ಮ ಭಾರತೀಯ ಸಂಸ್ಕೃತಿಯ ಸಮುದಾಯಗಳು ಸಂಸ್ಕೃತಿ-ಧರ್ಮವನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕೆಂದು ಹೇಳುತ್ತಿವೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಮನಸ್ಸಿನಲ್ಲಿರುವ ಮಾತನ್ನು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಪತ್ನಿ ಹೇಳಿರುವ ಮಾತಿನಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com