
ಪಣಜಿ: ಹುಡುಗಿಯರು ತೊಡುವ ಪ್ರಚೋದನಕಾರಿ ಉಡುಪುಗಳಿಂದಾಗಿಯೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂಬ ತನ್ನ ಪತ್ನಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಚಿವ ದೀಪಕ್ ಧವಳೀಕರ್ ಸಮರ್ಥಿಸಿಕೊಂಡಿದ್ದಾರೆ.
ಪಾಶ್ಯಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಹುಡುಗಿಯರು ತೊಡುತ್ತಿರುವ ಬಟ್ಟೆಗಳು ಅವರ ದೇಹವನ್ನು ಹೆಚ್ಚಾಗಿ ಪ್ರದರ್ಶನಗೊಳ್ಳುವಂತೆ ಮಾಡಿವೆ. ಹೀಗಾಗಿ ಅತ್ಯಾಚಾರಗಳು ಹೆಚ್ಚುತ್ತಿವೆ ಎಂದು ಧವಳೀಕರ್ ಹೇಳಿದ್ದಾರೆ.
ಈ ವೇಳೆ ಸಚಿವ ಧವಳೀಕರ್ ಅವರ ಪತ್ನಿ ಲತಾ ಅವರ ಈ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಪಣಜಿಯಲ್ಲಿ ಹುಡುಗಿಯರು, ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ತಮಗಿಷ್ಟವಾದ ಡ್ರೆಸ್ ಆಯ್ಕೆಮಾಡುವುದು ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಯಾರೂ ಕಸಿದುಕೊಳ್ಳುವಂತಿಲ್ಲ; ಸಂಸ್ಕೃತಿಯ ಹೆಸರಿನಲ್ಲಿ ಜೀವನ ಶೈಲಿಯ ಸ್ವಾತಂತ್ರ್ಯವನ್ನು ಕೂಡ ಯಾರೂ ಹನನ ಮಾಡುವಂತಿಲ್ಲ ಎಂದವರು ಫಲಕ ಪ್ರದರ್ಶಿಸಿ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ.
ಲತಾ ಧವಳೀಕರ್ ಅವರು ಮಾರ್ಗೋವಾದಲ್ಲಿನ ಸನಾತನ ಸಂಸ್ಥೆಯೊಂದರ ಸಮಾವೇಶದಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ, ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುತ್ತಿರುವುದರಿಂದಲೇ ಅವರ ಮೇಲಿನ ಲೈಂಗಿಕ ಶೋಷಣೆ ಹೆಚ್ಚುತ್ತಿವೆ ಎಂದು ಹೇಳಿದ್ದರು.
Advertisement