
ನವದೆಹಲಿ: ವಿದೇಶ ಪ್ರವಾಸಗಳಲ್ಲೇ ಸಮಯ ಹಣ ಮತ್ತು ಸಮಯ ವ್ಯಯ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿರುವವರಿಗೆ ಪ್ರಧಾನಿ ಮೋದಿ ನಗುನಗುತ್ತಲೇ ಉತ್ತರ ನೀಡಿದ್ದಾರೆ.
ಆಂಗ್ಲಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ನೀಡಿರುವ ಮೋದಿ ಸದ್ಯಕ್ಕೆ ಫ್ರಾನ್ಸ್ ಜರ್ಮನಿ ಹಾಗೂ ಕೆನಡಾ ಪ್ರವಾಸ ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಾ, `ನಾನು ಪಕ್ಕಾ ಅಹ್ಮದಾಬಾದಿ. ನಾವು ಅಷ್ಟು ಸುಲಭದಲ್ಲಿ ಖರ್ಚು ಮಾಡೋದಿಲ್ಲ. ಸಿಂಗಲ್ ಫೇರ್ ಡಬಲ್ ಜರ್ನಿ ಗುಜರಾತಿಗಳ ಜನಪ್ರಿಯ ಮಂತ್ರ. ಒಂದು ಬಾರಿ ಪ್ರವಾಸ ಫಿಕ್ಸ್ಆದರೆ ಎರಡರಿಂದ ಮೂರು ಜಾಗಗಳನ್ನು ಕವರ್ ಮಾಡುವ ಐಡಿಯಾ ನನ್ನದು. ಈಗ ಕೈಗೊಂಡಿರುವ ಪ್ರವಾಸ ಮೇಕ್ ಇನ್ ಇಂಡಿಯಾ ಯೋಜನೆಗೆ ಇನ್ನಷ್ಟು ಬಲ ತುಂಬಲಿದೆ'ಎಂದಿದ್ದಾರೆ.
`ಬಹಳ ವರ್ಷಗಳಿಂದ ಭಾರತದ ಯಾವ ಪ್ರಧಾನಿಯೂ ಯುರೋಪ್ ಪ್ರವಾಸ ಕೈಗೊಂಡಿಲ್ಲ. ಬಂಡವಾಳದ ಒಳಹರಿವು, ತಂತ್ರಜ್ಞಾನ ಮತ್ತು ಅಲ್ಲಿನ ಪದ್ದತಿಗಳನ್ನು ಇಲ್ಲಿಗೆ ತರೋದಕ್ಕೆ ಈ ಪ್ರವಾಸದ ಅಗತ್ಯವಿದೆ ಎಂದಿರುವ ಪ್ರಧಾನಿ, ಈ ಬಾರಿಯ ಭೇಟಿಯಲ್ಲಿ ಫ್ರಾನ್ಸ್ ನಿಂದ ನ್ಯೂಕ್ಲಿಯರ್ ರಿಯಾಕ್ಟರ್ ಮತ್ತು ಇಂಧನವನ್ನು, ಕೆನಡಾದಿಂದ ವಿದ್ಯುತ್ ಕೊಂಡುಕೊಳ್ಳುವ ಮಾತುಕತೆಗೆ ಇನ್ನಷ್ಟು ಮುನ್ನಡೆ ದೊರೆಯಲಿದೆ ಎಂಬ ವಿಶ್ವಾಸ ನೀಡಿದ್ದಾರೆ. ಜರ್ಮನಿಯ ಹನ್ನೋವರ್ ಮೇಳದಲ್ಲಿ ಭಾಗವಹಿಸಲಿರುವ ಮೋದಿ, ಫ್ರಾನ್ಸ್ ಮತ್ತು ಕೆನಡಾ ಭೇಟಿಯೂ ಫಲಪ್ರದವಾಗಲಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
ಇಸ್ಲಾಮಾಬಾದ್ ಜೊತೆ ಮಾತುಕತೆಗೆ ಸಿದ್ಧ
ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಭಾರತ ಸದಾ ಸಿದ್ಧ. ಭಯೋತ್ಪಾದನೆ ಮತ್ತು ಹಿಂಸೆ ಯಿಂದ ಮುಕ್ತವಾದ ವಾತಾವರಣ ನಿರ್ಮಾಣ ವಾಗುವುದಾದರೆ ಅದಕ್ಕಿಂತ ಸಂತೋಷದ ವಿಷಯವಿಲ್ಲ ಎಂದು ಮೋದಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
Advertisement