
ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 5,500 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ಯೆಮೆನ್ ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೂರಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೈಗೊಂಡಿದ್ದ ಸ್ವದೇಶಿ ನಾಗರೀಕರ ರಕ್ಷಣಾ ಕಾರ್ಯಾಚರಣೆಯು ಗುರುವಾರ ಅಂತ್ಯಗೊಂಡಿದೆ. ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿತ್ತು.
ಯೆಮೆನ್ ನಿಂದ ಇಲ್ಲಿಯವರೆಗೂ 5,500ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದ್ದು, ಇದರಲ್ಲಿ 4640 ಮಂದಿ ಭಾರತೀಯರಾಗಿದ್ದಾರೆ. ಇನ್ನುಳಿದಂತೆ 960 ವಿದೇಶಿಯರು ಎಂದು ತಿಳಿದು ಬಂದಿದೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 349 ಮಂದಿಯನ್ನು ರಕ್ಷಿಸಲಾಗಿದೆ. ಇದರಲ್ಲಿ 46 ಮಂದಿ ಮಾತ್ರ ಭಾರತೀಯರಿದ್ದು, ಉಳಿದವರು ವಿದೇಶಿಗರು ಎನ್ನಲಾಗಿದೆ.
ಅಂತಿಮ ಕಾರ್ಯಚರಣೆಯ ವಿಶೇಷ ಸಂಗತಿ ಎಂದರೆ 3 ದಿನದ ಹಸುಗೂಸು ಹಾಗೂ ಅದನ್ನು ಪೋಷಿಸುತ್ತಿದ್ದ ವೈದ್ಯರನ್ನೂ ಕೂಡ ಸುರಕ್ಷಿತವಾಗಿ ಅವರ ರಾಷ್ಟ್ರಕ್ಕೆ ಭಾರತೀಯ ರಕ್ಷಣಾ ಪಡೆ ತಲುಪಿಸಿದೆ. ಕಾರ್ಯಾಚರಣೆ ಮುಗಿಸಿಕೊಂಡು ನೇರವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ವಿ.ಕೆ ಸಿಂಗ್ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು.
Advertisement