

ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಪೆದ್ಮಾಲ್ ಅರಣ್ಯ ಪ್ರದೇಶದಲ್ಲಿ ಶನಿವಾರ ನಕ್ಸಲರು ಎಸ್‌ಟಿಎಫ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಪೊಲೀಸರು ಮೃತಪಟ್ಟಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.
ಪೆದ್ಮಾಲ್ ಮತ್ತು ಪೊಲಂಪಲ್ಲಿ ಗ್ರಾಮಗಳ ನಡುವೆ ನಕ್ಸಲರು ಎಸ್‌ಟಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಏಳು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ವಿಜಿ ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟವರನ್ನು ಪ್ಲಾಟೂನ್ ಕಮಾಂಡರ್ ಶಂಕರ್ ರಾವ್, ಮುಖ್ಯ ಪೇದೆಗಳಾದ ರೊಹಿತ್ ಸೊಧಿ ಮನೋಜ್ ಬಘೇಲ್ ಹಾಗೂ ಪೇದೆಗಳಾದ ಮೋಹನ್ ವಿ.ಕೆ., ರಾಜಕುಮಾರ್ ಮಿರ್ಕುಮ್, ಕಿರಣ್ ದೇಶ್ಮುಖ್ ಮತ್ತು ರಾಜ್‌ಮನ್ ತೆಕಮ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಜಗದಲ್ಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.