
ನೈಜೀರಿಯಾ: ಬೋಕೋ ಹರಮ್ ಎಂಬ ಉಗ್ರ ಸಂಘಟನೆಯಿಂದ ಅಪಹರಣಕ್ಕೊಳಗಾದ ಹೆಣ್ಣುಮಕ್ಕಳನ್ನು ಹುಡುಕಿಕೊಡಲಾಗುತ್ತದೆ ಎಂದು ನಾನು ಪ್ರಮಾಣ ಮಾಡಲು ಸಾಧ್ಯವಿಲ್ಲ ಎಂದು ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ ಸೋಮವಾರ ಹೇಳಿದ್ದಾರೆ.
ನೈಜೀರಿಯಾ ದೇಶದ ಈಶಾನ್ಯ ಭಾಗದಲ್ಲಿರುವ ಚಿಬಕ್ ಪಟ್ಟಣದ ಶಾಲೆಯೊಂದರ ಮೇಲೆ ದಾಳಿ ಮಾಡಿದ ಬೊಕೋ ಹರಮ್ ಎಂಬ ಉಗ್ರ ಸಂಘಟನೆಯು ಶಾಲೆಯಲ್ಲಿದ್ದ ಸುಮಾರು 219 ಹೆಣ್ಣು ಮಕ್ಕಳನ್ನು ಅಪಹರಿಸಿತ್ತು. ಈ ಘಟನೆ ನಡೆದು ಇಂದಿಗೆ 1 ವರ್ಷ ಕಳೆದಿದೆ ಆದರೂ ಅಪಹರಕ್ಕೊಳಗಾದ ಬಾಲಕಿಯರ ಪತ್ತೆ ಈ ವರೆಗೂ ಸಾಧ್ಯವಾಗಿಲ್ಲ. ಅಪಹರಣಕ್ಕೊಳಗಾದ ಬಾಲಕಿಯರ ಪತ್ತೆಗಾಗಿ ಅಲ್ಲಿನ ಅಧಿಕಾರಿಗಳು ಇಂದಿಗೂ ಹರಸಾಹಸ ಪಡುತ್ತಿದ್ದಾರಾದರೂ ಈವರೆಗೂ ಯಾವುದೇ ಸುಳಿವುಗಳು ಸಿಕ್ಕಿಲ್ಲ.
ಈ ಘಟನೆ ಕುರಿತಂತೆ ಮಾತನಾಡಿರುವ ನೈಜೀರಿಯಾ ಅಧ್ಯಕ್ಷ ಮುಹಮದ್ ಬುಹಾರಿ ಅವರು, ಅಪಹರಣಕ್ಕೊಳಗಾದ ಬಾಲಕಿಯರ ರಕ್ಷಣೆ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಆದರೂ ಈ ವರೆಗೂ ಯಾವುದೇ ಸುಳಿವುಗಳು ಸಿಕ್ಕಿಲ್ಲ. ಆದ್ದರಿಂದ ಬಾಲಕಿಯರನ್ನು ರಕ್ಷಿಸಿ ಮರಳಿ ಪೋಷಕರಿಗೆ ನೀಡುವ ಕುರಿತು ಪ್ರಮಾಣ ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಪಹರಣಕ್ಕೊಳಗಾದ ಬಾಲಕಿಯರ ರಕ್ಷಿಸಲು ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತದೆ ಎಂಬ ಧೈರ್ಯವಂತೂ ಅಪಹರಣಕ್ಕೊಳಗಾದ ಬಾಲಕಿಯರ ಪೋಷಕರು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನೀಡಬಲ್ಲೆ ಎಂದು ಮುಹಮದ್ ಬುಹಾರಿ ಹೇಳಿದ್ದಾರೆ.
Advertisement