
ಶ್ರೀನಗರ: ಕಳೆದ ವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಪ್ರತ್ಯೇಕತಾವಾದಿ ಮಸರತ್ ಅಲಂ ಬುಧವಾರ ಶ್ರೀನಗರದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಪಾಕಿಸ್ತಾನದ ಬಾವುಟ ಹಾರಿಸಿದ್ದಾನೆ.
ಲಾಲ್ ಚೌಕ್ ನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ಮಸರತ್ ಅಲಂ, ಭಾರತ ವಿರುದ್ಧ ಶ್ರೀನಗರದಲ್ಲಿ ರ್ಯಾಲಿ ನಡೆಸಿದ್ದು, ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಪಾಕ್ ಉಗ್ರರ ನಾಯಕರನ್ನು ಶ್ಲಾಘಿಸಿದ್ದಾನೆ. ಅಲ್ಲದೇ, ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾನೆ.
ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರವು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಅಲಂನನ್ನು ಮಾರ್ಚ್ 7ರಂದು ಬಿಡುಗಡೆ ಮಾಡಿತ್ತು. ಪ್ರತ್ಯೇಕತಾವಾದಿ ಸಂಘಟನೆಯಾಗಿರುವ ಹುರಿಯತ್ ಕಾನ್ಫರೆನ್ಸ್‌ನ ಮುಂಚೂಣಿ ನಾಯಕನಾಗಿದ್ದ ಮಸರತ್ ಅಲಂ ಈ ಹಿಂದೆ ಜಮ್ಮುಕಾಶ್ಮೀರದಲ್ಲಿ ನಡೆದ ಗಲಭೆಗಳು ಹಾಗೂ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ.
ಕಣಿವೆ ರಾಜ್ಯದಲ್ಲಿ 2010ರ ಸಂದರ್ಭ ನಡೆದಿದ್ದ ವಿವಿಧ ಗಲಭೆಗಳು, ಭದ್ರತಾ ಪಡೆಗಳ ಮೇಲಿನ ಹಲ್ಲೆ ಮತ್ತು ಇತರ ಸಮಾಜಘಾತುಕ ಕೃತ್ಯಗಳಲ್ಲಿ ಮಸರತ್ ಪ್ರಮುಖ ಪಾತ್ರ ವಹಿಸಿದ್ದ. ಈ ಗಲಭೆಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 112 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದರು.
ಇಂದಿಗೂ ಕೂಡ ಮಸರತ್ ಅಲಂ ತನ್ನ ಪ್ರತ್ಯೇಕತಾವಾದಿ ಹೋರಾಟವನ್ನು ಮುಂದುವರೆಸಿದ್ದು, ಭಾರತ ವಿರೋಧಿ ನಿಲುವು ತಳೆದಿರುವ ವ್ಯಕ್ತಿ. ಮುಸ್ಲೀಂ ಲೀಗ್ ಅಧ್ಯಕ್ಷನೂ ಆಗಿರುವ ಮಸರತ್ ಹಲವು ಉಗ್ರಗಾಮಿ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದು, ಭಾರತದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಲೇ ಬಂದಿದ್ದಾನೆ. ಇವನನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿಡಲಾಗಿತ್ತು. ಬಂಧನಕ್ಕೂ ಮೊದಲು ನಾಪತ್ತೆಯಾಗಿದ್ದ ಮಸರತ್ ಅಲಂ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಮಸರತ್ ಅಲಂ ಬಿಡುಗಡೆಗೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಸರತ್ ಅಲಂ ಬಿಡುಗಡೆ ಅಸಮಾಧಾನ ವ್ಯಕ್ತಪಡಿಸಿ, ಜಮ್ಮು ಕಾಶ್ಮೀರ ಸರ್ಕಾರದಿಂದ ಸ್ಪಷ್ಟನೇ ಕೇಳಿದ್ದರು.
Advertisement