ಭಾರತ ನೈಪುಣ್ಯತೆಯ ದೇಶ ಹೊರತು ಹಗರಣಗಳ ದೇಶವಲ್ಲ: ಮೋದಿ

ಭಾರತ ನೈಪುಣ್ಯತೆಯ ದೇಶ ಹೊರತು ಹಗರಣಗಳ ದೇಶ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಟೊರಾಂಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ
ಟೊರಾಂಟೊದಲ್ಲಿ ಪ್ರಧಾನಿ ನರೇಂದ್ರ ಮೋದಿ
Updated on

ಟೊರಾಂಟೊ: ಭಾರತ ನೈಪುಣ್ಯತೆಯ ದೇಶ ಹೊರತು ಹಗರಣಗಳ ದೇಶ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಟೊರಾಂಟೋದಲ್ಲಿ ನಡೆದ ಅನಿವಾಸಿ ಭಾರತೀಯರ ವೇದಿಕೆಯಲ್ಲಿ ಮಾತನಾಡಿದ ಮೋದಿ, 2030ರ ವೇಳೆಗೆ ಭಾರತವನ್ನು ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮ ಗುರಿ. ಕ್ಷಿಪ್ರ ಪ್ರಗತಿಯೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತ ಅಭಿವೃದ್ಧಿಯ ಹರಿಕಾರನಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮದು ನೈಪುಣ್ಯತೆಯ ಭಾರತವೇ ಹೊರತು ಹಗರಣಗಳ ಭಾರತವಲ್ಲ ಎಂದು ಹೇಳಿದರು.

ಭಾರತದ ನೈಜ ಪ್ರತಿಭೆ, ನೈಪುಣ್ಯತೆಯನ್ನು ಅನಿವಾಸಿ ಭಾರತೀಯರ ವೇದಿಕೆಯಲ್ಲಿ ತೆರೆದಿಟ್ಟ ನರೇಂದ್ರ ಮೋದಿ, ನಾವು ಹಾಲಿವುಡ್ ಸಿನಿಮಾ ನಿರ್ಮಾಣಕ್ಕೂ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಮಾಡಿದ್ದೇವೆ. ಭಾರತೀಯರ ಅಸಾಧಾರಣ ಪ್ರತಿಭೆಯನ್ನು ಈ ಮಂಗಳಯಾನ ಅನಾವರಣಗೊಳಿಸಿದೆ ಎಂದು ಮೋದಿ ಹೇಳಿದಾಗ ಸಮಾರಂಭದಲ್ಲಿ ನೆರೆದಿದ್ದ ಭಾರತೀಯ ಪ್ರಜೆಗಳ ಕರತಾಂಡನ ಮುಗಿಲು ಮುಟ್ಟಿತ್ತು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಮೋದಿ, ಹಿಂದಿನ ಸರ್ಕಾರಗಳು ಮಾಡಿದ್ದ ಕೊಳೆಯನ್ನು ನಾನು ಸ್ವಚ್ಛಗೊಳಿಸುತ್ತಿದ್ದೇನೆ. ದೇಶದಲ್ಲೀಗ ನಂಬಿಕೆ ಮತ್ತು ಭರವಸೆಗಳ ವಾತಾವರಣ ಮೂಡುತ್ತಿದೆ. ನಾನು ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಭಾರತೀಯರ ಮನಸುಗಳಲ್ಲಿ ಭರವಸೆಯ ಬೆಳಕು ಮೂಡಿಸಿ ವಿಶ್ವಾಸ ಗಳಿಸಿದ್ದೇನೆ ಎಂದರು.

ಈ ಹಿಂದೆ ಆಡಳಿತ ನಡೆಸಿದ ಯಾವುದೇ ಪ್ರಧಾನಿಗಳೂ ಮಾಡದ ಕೆಲಸಗಳನ್ನು ನಾನು 10 ತಿಂಗಳಲ್ಲಿ ಮಾಡಿದ್ದೇನೆ. ಇದಕ್ಕೆ ಭಾರತೀಯರ ಸಹಕಾರವಿದೆ. ಕೆನಡಾದ ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ನಮ್ಮ ಅಭಿವೃದ್ಧಿಗೆ ಅಗತ್ಯವಾದ ಯುರೇನಿಯಂ ನಮಗೆ ಕೆನಡಾ ಒದಗಿಸಲಿದೆ. ಸುಮಾರು 254 ಮಿಲಿಯನ್ ಡಾಲರ್ ಮೌಲ್ಯದ ಮೂರು ಸಾವಿರ ಮೆಟ್ರಿಕ್‌ಟನ್ ಯುರೇನಿಯಂಅನ್ನು ಕೆನಡಾ ಮುಂದಿನ ಐದು ವರ್ಷಗಳಲ್ಲಿ ಭಾರತಕ್ಕೆ ಪೂರೈಸಲಿದೆ ಎಂದು ಮೋದಿ ಹೇಳಿದರು. ಕಳೆದ 42 ವರ್ಷಗಳಲ್ಲಿ ಕೆನಡಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com