
ರೋಮ್: 728ಕ್ಕೂ ಹೆಚ್ಚು ಲಿಬಿಯಾ ಅಕ್ರಮ ವಲಸಿಗರನ್ನು ಹೊತ್ತ ಬೃಹತ್ ಹಡಗೊಂದು ಮಧ್ಯ ಮೆಡಿಟೇರಿಯನ್ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದು, ಪರಿಣಾಮ ಹಡಗಿನಲ್ಲಿದ್ದವರ ಪೈಕಿ 700 ಮಂದಿ ಜಲಸಮಾಧಿಯಾಗಿರುವ ಬಗ್ಗೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿಮಾಡಿವೆ.
ಕಳೆದ ರಾತ್ರಿ ಲಿಬಿಯಾ ಕರಾವಳಿಯಿಂದ 120 ಮೈಲಿ ದೂರದ ಲ್ಯಾಂಪೆಡುಸಾ ಎಂಬಲ್ಲಿ ಹಡಗು ದುರಂತಕ್ಕೀಡಾಗಿದ್ದು, 700 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದೇ ವೇಳೆ 28 ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ವಾರವಷ್ಟೇ ಲಿಬಿಯಾ ಕರಾವಳಿಯಲ್ಲಿ ಅಕ್ರಮ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 400 ಮಂದಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘೋರ ದುರಂತ ಸಂಭವಿಸಿದೆ.
ಆಂತರಿಕ ಸಂಘರ್ಷ, ಬಡತನದಿಂದ ಬೆಂದು ಹೋಗಿರುವ ಲಿಬಿಯಾ ಜನತೆ, ಯುರೋಪ್ ರಾಷ್ಟ್ರಗಳಿಗೆ ವಲಸೆ ಹೋಗುವುದು ಸಾಮಾನ್ಯ. ಮೆಡಿಟರೇನಿಯನ್ ವಲಯದಲ್ಲಿ ಇದೀಗ ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ, ಅಕ್ರಮ ವಲಸಿಗರು, ಇದೇ ಸಂದರ್ಭವನ್ನು ಅಕ್ರಮ ಪ್ರಯಾಣಕ್ಕೆ ಬಳಸಿಕೊಳ್ಳುತ್ತಾರೆ.
Advertisement