
ಲಾಗೋಸ್: ಮಾರಣಾಂತಿಕ ರೋಗಗಳ ಉಗಮಸ್ಥಾನವಾಗಿರುವ ಆಫ್ರಿಕಾದಲ್ಲಿ ಮತ್ತೊಂದು ಮಾರಣಾಂತಿಕ ರೋಗ ಕಾಣಿಸಿಕೊಂಡಿದ್ದು, ಈ ನಿಗೂಢ ರೋಗ ಸೋಕಿದ 24 ಗಂಟೆಯೊಳಗಾಗಿ ರೋಗಿ ಬಲಿಯಾಗುತ್ತಾನೆ.
ನೈಜೀರಿಯಾದ ಆಗ್ನೇಯ ಭಾಗದಲ್ಲಿನ ಪಟ್ಟಣದಲ್ಲಿ ನಿಗೂಢ ರೋಗವೊಂದು 18 ಮಂದಿಯನ್ನು ಬಲಿಪಡೆದಿದೆ. ನೈಜೀರಿಯಾದ ಓಡ್ ಲಿರಿಲ್ ಪಟ್ಟಣದಲ್ಲಿ ಈ ಬಗೆಯ ನಿಗೂಢ ರೋಗವೊಂದು ದಾಳಿಯಿಟ್ಟಿದ್ದು, ಪ್ರಸ್ತುತ ಒಂದು ವಾರದಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡ 23 ಮಂದಿಯ ಪೈಕಿ 18 ಮಂದಿ ಮೃತಪಟ್ಟಿದ್ದಾರೆ.
ರೋಗದ ಲಕ್ಷಣಗಳು
ತಲೆನೋವು, ತೂಕ ನಷ್ಟ, ಮಂದ ದೃಷ್ಟಿ ಮತ್ತು ಪ್ರಜ್ಞೆ ಕಳೆದುಕೊಳ್ಳುವ ಲಕ್ಷಣಗಳು ರೋಗಿಯಲ್ಲಿ ಕಾಣಿಸಿಕೊಂಡು, 24 ಗಂಟೆಗಳ ಒಳಗೆ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂದು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ನಿಗೂಢ ಸಾವಿನ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಎಬೋಲ ಅಥವಾ ಇನ್ನಾವುದೇ ಮಾರಣಾಂತಿಕ ಸೋಂಕಿನ ಬಗ್ಗೆ ಸರ್ಕಾರಿ ಆರೋಗ್ಯ ಅಧಿಕಾರಿಗಳು, ಚಿಕಿತ್ಸಾ ಸಂಸ್ಥೆಗಳ ಸೋಂಕುಶಾಸ್ತ್ರಜ್ಞರು ರೋಗ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement