
ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ನಿಗೂಢ ಸಾವಿನ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೋಸ್ ಕುಟುಂಬದ 10 ಸದಸ್ಯರಿಗೆ ದೆಹಲಿ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಬೋಸ್ ಕುಟುಂಬದ ಎಲ್ಲಾ ಸದಸ್ಯರನ್ನು ಭೇಟಿ ಮಾಡಲು ಬಯಸಿದ್ದು, ಮೇ 17ಕ್ಕೆ ದೆಹಲಿಗೆ ಬರುವಂತೆ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ.
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಪಡಿಸುವ ಕುರಿತು ಕುಟುಂಬದೊಂದಿಗೆ ಚರ್ಚಿಸಿ, ಬಳಿಕ ಬಹಿರಂಗಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗಷ್ಟೆ ಬರ್ಲಿನ್‌ನಲ್ಲಿ ಬೋಸ್ ಸಂಬಂಧ ಸೂರ್ಯ ಕುಮಾರ್ ಬೋಸ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸುವ ಕುರಿತು ಪರಿಶೀಲಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು.
ಬೋಸ್ ಕುಟುಂಬದ ವಿರುದ್ಧ ನೆಹರೂ ಸರ್ಕಾರ ಎರಡು ದಶಕಗಳ ಕಾಲ ನಡೆಸಿದ ಬೇಹುಗಾರಿಕೆ ವಿಚಾರ ಸೋರಿಕೆಯಾಗುತ್ತಿದ್ದಂತೆ ನೇತಾಜಿ ಸಾವಿನ ಕುರಿತ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ.
Advertisement