ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್

ವರ್ಷದಲ್ಲಿ 6 ತಿಂಗಳು ರಜೆ, ಇದು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮಾತ್ರ ಸಾಧ್ಯ

ಉತ್ತರ ಪ್ರದೇಶ ಸರ್ಕಾರಿ ನೌಕರರಿಗೆ ಅಖಿಲೇಶ್ ಯಾದವ್ ಸರ್ಕಾರ ರಜೆಗಳ ಮಹಾಪೂರವೇ ಹರಿಸಿದೆ.ಸರ್ಕಾರಿ ನೌಕರರಿಗೆ ಹೆಚ್ಚುವರಿಯಾಗಿ ಮೂರು ರಜೆಗಳನ್ನು ಘೋಷಿಸಿದೆ.
Published on

ಲಖನೌ: ಉತ್ತರ ಪ್ರದೇಶ ಸರ್ಕಾರಿ ನೌಕರರಿಗೆ ಅಖಿಲೇಶ್ ಯಾದವ್ ಸರ್ಕಾರ ರಜೆಗಳ ಮಹಾಪೂರವೇ ಹರಿಸಿದೆ. ಇಲ್ಲಿನ ಸರ್ಕಾರಿ ನೌಕರರು ವರ್ಷದಲ್ಲಿ ಕೇವಲು 6 ತಿಂಗಳು ಕೆಲಸ ಮಾಡಿದರೆ ಸಾಕು, ಇನ್ನಾರು ತಿಂಗಳ ಮನೆಯಲ್ಲಿಯೇ ಕುಳಿತು ಸಂಬಳ ಪಡೆಯಬಹುದು.

ನಾಲ್ಕು ವರ್ಷ ಅಧಿಕಾರವಧಿ ಪೂರೈಸಿ ಚುನಾವಣೆ ಹೊಸ್ತಿಲಲ್ಲಿರುವ ಸಮಾಜವಾದಿ ಪಕ್ಷದ ಸರ್ಕಾರ, ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರಿ ನೌಕರರಿಗೆ ಹೆಚ್ಚುವರಿಯಾಗಿ ಮೂರು ರಜೆಗಳನ್ನು ಘೋಷಿಸಿದೆ.

ರಾಜಕೀಯ ನಾಯಕರುಗಳ ಹುಟ್ಟುಹಬ್ಬಕ್ಕಾಗಿ ಈ ಮೂರು ಸರ್ಕಾರಿ ರಜೆಗಳನ್ನು ಸರ್ಕಾರ ಘೋಷಿಸಿದ್ದು, ಮಾಜಿ ಪ್ರಧಾನಿಗಳಾದ ಚರಣ್ ಸಿಂಗ್,  ಚಂದ್ರಶೇಖರ್ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಜನ್ಮ ದಿನದ ಅಂಗವಾಗಿ ರಜೆ ಘೋಷಿಸಲಾಗಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಸರ್ಕಾರಿ ಸಾರ್ವತ್ರಿಕ ರಜೆಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ವಿಧಾನ ಸಭಾ ಮತ್ತು ಇಲಾಖೆಗಳ ಪ್ರಧಾನ ಕಚೇರಿ ಸಿಬ್ಬಂದಿಗೆ ವಾರದಲ್ಲಿ 5 ದಿನ ಕೆಲಸ,  ಜಿಲ್ಲಾ ಮಟ್ಟದ ನೌಕರರಿಗೆ ತಿಂಗಳಿಗೆ ಮೂರು ದಿನ ರಜೆಯ ಜೊತೆಗೆ 2 ದಿನ ಹೆಚ್ಚುವರಿ ರಜೆ ನೀಡಲಾಗಿದೆ.

ದೇಶದ ಅತಿ ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ ಹಾಗೂ ತಮಿಳುನಾಡಿನಲ್ಲಿ ವರ್ಷಕ್ಕೆ 25 ಸಾರ್ವತ್ರಿಕ ರಜೆ ನೀಡಲಾಗಿದೆ. ಆದರೆ ಅಖಿಲೇಶ್ ಯಾದವ್ ಅವರ ಉತ್ತರ ಪ್ರದೇಶದಲ್ಲಿ ಮಾತ್ರ 38 ಸಾರ್ವತ್ರಿಕ ರಜೆ. ಸರ್ಕಾರದ ಈ ನಿರ್ಧಾರದಿಂದಾಗಿ ಸರ್ಕಾರಿ ನೌಕರರಿಗೆ ಭಾನುವಾರ ಹಾಗೂ ಇತರೆ ಸಾಂಧರ್ಭಿಕ ರಜೆ ಸೇರಿದಂತೆ ವರ್ಷದಲ್ಲಿ ಅರ್ಧದಷ್ಟು ರಜಾ ದಿನಗಳು ದೊರೆಯಲಿವೆ.

ಅಖಿಲೇಶ್ ಯಾದವ್ ಸರ್ಕಾರದ ಈ ನಿರ್ಧಾರ ತೀವ್ರ ಚರ್ಚೆಗೆ ಕಾರಣವಾಗಿದ್ದು, ರಜಾ ರಾಜಕೀಯ ವಿರುದ್ಧ ಅಮಿತಾಬ್ ಠಾಕೂರ್ ಎಂಬುವವರು ಲಖನೌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಠಾಕೂರ್, ರಾಜಕೀಯ ನಾಯಕರುಗಳ ಹುಟ್ಟು ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರ್ಕಾರಿ ರಜೆಯ ಪ್ರಮಾಣವನ್ನು ತಗ್ಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com