
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೂಟು ಬೂಟುಧಾರಿಗಳ ಸರ್ಕಾರ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯೆ ನೀಡಿದೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಲೂಟಿ ಮತ್ತು ಸೂಟ್‌ಕೇಸ್‌ನ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದೆ.
16ನೇ ಲೋಕಸಭಾ ಅಧಿವೇಶನದಲ್ಲಿ ರಾಹುಲ್ ನೀಡಿದ ಭಾಷಣದ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಾ ಪ್ರಹಾರ ನಡೆಸಿದ್ದಾರೆ. 11 ವರ್ಷಗಳ ಅವಧಿಯಲ್ಲಿ ರಾಹುಲ್ 3 ನೇ ಬಾರಿ ಭಾಷಣ ಮಾಡಿದ್ದು ಹೇಗೆ ಎಂಬುದನ್ನು ನಾವು ನೋಡಿದ್ದೇವೆ. ಕಡೇ ಪಕ್ಷ ರಾಹುಲ್ ಮಾತಾಡಿದರಲ್ಲ ಎಂಬ ಖುಷಿ ಕಾಂಗ್ರೆಸ್‌ಗೆ. ಅದಕ್ಕಾಗಿ ನಾವು ಕಾಂಗ್ರೆಸ್‌ನ್ನು ಅಭಿನಂದಿಸುತ್ತೇವೆ.
ಆದರೆ ಮೊದಲೇ ಬರೆದು ಕೊಟ್ಟ ಭಾಷಣ ಮತ್ತು ನಾಟಕೀಯವಾದ ಕೋಪ ಒಬ್ಬ ನಾಯಕನನ್ನು ರೈತರ ನಾಯಕನಾಗಿ ಮಾಡಲ್ಲ ಎಂದು ಹೇಳಿದ ಪಾತ್ರಾ, ರಾಹುಲ್ ಮೋದಿ ಸರ್ಕಾರ ಸೂಟು ಬೂಟುಧಾರಿಗಳ ಸರ್ಕಾರ ಎಂದು ಹೇಳಿರುವುದನ್ನು ಖಂಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಅವರು ಲೂಟಿ ಮಾಡಿ ಸರ್ಕಾರ ನಡೆಸುತ್ತಿದ್ದರು. ಅಂಥಾ ವ್ಯಕ್ತಿಗಳು ಇದೀಗ ಚೆನ್ನಾಗಿ ಆಡಳಿತ ನಡೆಸುತ್ತಿರುವ ನಮ್ಮ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಹೊಂದಿಲ್ಲ . ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಯ ನೇತೃತ್ವದಲ್ಲಿ ಲೂಟಿ ಮಾಡುವ ಸರ್ಕಾರ ಆಡಳಿತ ನಡೆಸಿತ್ತು ಎಂದು ಪಾತ್ರಾ ಹೇಳಿದ್ದಾರೆ .
ಇದೀಗ ಕಾಂಗ್ರೆಸ್ ರೈತರ ಮನವೊಲಿಸಲು ಯತ್ನಿಸುತ್ತಿದೆ. ಆದರೆ ಇದು ಸಾಧ್ಯವಾಗಲ್ಲ. ಕಿಸಾನ್ ರ್ಯಾಲಿ ಮಾಡಿದ್ದು ರೈತರಿಗೋಸ್ಕರ ಅಲ್ಲ, ಅದು ರಾಹುಲ್ ಬಚಾವೋ ರ್ಯಾಲಿಯಾಗಿತ್ತು.
ನಿನ್ನೆ ಸಂಸತ್ತಿನಲ್ಲಿ ರಾಹುಲ್ ಭೂಸ್ವಾಧೀನ ಕಾಯ್ದೆ ಮಸೂದೆಯ ಬಗ್ಗೆ ಮಾತಾಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ಅದು ಭೂಸ್ವಾಧೀನ ಅಲ್ಲ ರಾಹುಲ್ ಸ್ವಾಧೀನ ಗಿಟ್ಟಿಸುವುದಾಗಿತ್ತು. ಕಾಂಗ್ರೆಸ್‌ನಲ್ಲಿ ರಾಹುಲ್‌ನ್ನು ಗಟ್ಟಿಯಾಗಿ ನೆಲೆವೂರಿಸುವ ದೃಷ್ಟಿಯಲ್ಲಿ ಕಾಂಗ್ರೆಸ್ ಇದೆಲ್ಲಾ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement