
ಮುಂಬಯಿ: 2002ರ ಗುದ್ದೋಡು ಪ್ರಕರಣದ ವಾದಗಳು ಮತ್ತು ವಿಚಾರಣೆ ಮುಕ್ತಾಯಗೊಂಡಿದ್ದು, ಮೇ 6ಕ್ಕೆ ತೀರ್ಪು ಪ್ರಕಟಿಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಮಂಗಳವಾರ ಹೇಳಿದೆ.
ಕಳೆದ 13 ವರ್ಷಗಳಿಂದ ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಅಂತಿಮ ತೀರ್ಪಿನ ದಿನಾಂಕವನ್ನು ಮಂಗಳವಾರ ಪ್ರಕಟಿಸುವುದಾಗಿ ನಿನ್ನೆ ಹೇಳಿತ್ತು. ಅದರಂತೆ ಇಂದು ದಿನಾಂಕವನ್ನು ಪ್ರಕಟಿಸಿರುವ ಕೋರ್ಟ್ ಪ್ರಕರಣ ಸಂಬಂಧ ತೀರ್ಪುನ್ನು ಮೇ 6ಕ್ಕೆ ಪ್ರಕಟಿಸಲಿದೆ.
ವಾದ ವಿವಾದ
ಪ್ರಕರಣದ ಪ್ರತ್ಯಕ್ಷದರ್ಶಿ ರವೀಂದ್ರ ಪಾಟೀಲ್‌ರ ಸಾಕ್ಷ್ಯವನ್ನು ಒಪ್ಪಲಾಗದು. ಆತ ಮೃತಪಟ್ಟಿದ್ದು, ಮರು ವಿಚಾರಣೆಗೆ ಲಭ್ಯವಿಲ್ಲ,'' ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದರು.
ಮುಂಬೈ ಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಅಂತಿಮ ಹಂತದ ವಿಚಾರಣೆ ವೇಳೆ, ತಮ್ಮ ವಾದಕ್ಕೆ ಇನ್ನಷ್ಟು ಸಮಯಾವಕಾಶವನ್ನು ಸಲ್ಮಾನ್ ಪರ ವಕೀಲರು ಕೋರಿದ್ದರು. ಇದಕ್ಕೆ ಒಪ್ಪದ ಸೆಷನ್ಸ್ ನ್ಯಾಯಾಧೀಶರು, ''ನಿಮ್ಮ ವಾದವನ್ನು ಏ. 20ರಂದು ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದ್ದರು.
ಸಲ್ಮಾನ್ ಖಾನ್ ಚಾಲಕ ಅಶೋಕ್ ಸಿಂಗ್ ಸೇರಿದಂತೆ 27 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ, ಘಟನೆ ನಡೆದ ಸಮಯದಲ್ಲಿ ಕಾರು ಚಾಲನೆ ಮಾಡುತ್ತಿದ್ದುದು ತಾನೇ ಎಂದು ಚಾಲಕ ಅಶೋಕ್ ಸಿಂಗ್ ಒಪ್ಪಿಕೊಂಡಿದ್ದಾನೆ.
2002ರ ಸೆಪ್ಟೆಂಬರ್ 28ರಂದು ಸಲ್ಮಾನ್ ಖಾನ್ ಅವರಿದ್ದ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರು ವಾಣಿಜ್ಯನಗರಿ ಮುಂಬಯಿಯ ಬಾಂದ್ರಾ ಬಳಿಯ ಬೇಕರಿಗೆ ನುಗ್ಗಿದ್ದರಿಂದ ಒಬ್ಬ ಮೃತ ಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.
Advertisement