

ಪಣಜಿ: ರಕ್ಷಣ ಸಚಿವ ಮನೋಹರ ಪರಿಕ್ಕರ್ ಅವರ ಅಧಿಕೃತ ನಿವಾಸದಲ್ಲಿ ತಲಾಷ್ ನಡೆಸಲು ಗೋವಾ ಟ್ರಯಲ್ ಕೋರ್ಟ್ ಬುಧವಾರ ವಾರೆಂಟ್ ಜಾರಿ ಮಾಡಿದೆ.
ಕಳೆದ 15 ದಿನಗಳಿಂದ ತಲೆ ಮರೆಸಿಕೊಂಡಿರುವ ಗೋವಾ ಮಾಜಿ ಮಂತ್ರಿ ಫ್ರಾನ್ಸಿಸ್ಕೋ ಮಿಕ್ಕಿ ಪಚಾವೋ ಪರಿಕ್ಕರ್ ಅವರ ನಿವಾಸದಲ್ಲಿ ತರೆ ಮರೆಸಿಕೊಂಡಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಪರಿಕ್ಕರ್ ಅವರ ಅಧಿಕೃತ ನಿವಾಸದಲ್ಲಿ ಶೋಧ ನಡೆಸಲು ಗೋವಾ ಪೊಲೀಸರಿಗೆ ಕೋರ್ಟ್ ವಾರೆಂಟ್ ಜಾರಿ ಮಾಡಿದೆ.
2006ರಲ್ಲಿ ಸ್ಟೇಟ್ ಇಲೆಕ್ಟ್ರಿಕಲ್ ಡಿಪಾರ್ಟ್ ಮೆಂಟ್ ನ ಜ್ಯೂನಿಯರ್ ಇಂಜಿನಿಯರ್ ಕಪಿಲ್ ನಟೇಕರ್ ತನ್ನ ಆಪ್ತ ಸಹಾಯಕನ ಫೋನ್ ಕರೆ ಸ್ವೀಕರಿಸಿಲ್ಲ ಎಂಬ ಸಿಟ್ಟಿನಿಂದ ಅಂದು ಗೋವಾ ವಿಕಾಸ್ ಪಕ್ಷದ ಶಾಸಕರಾಗಿದ್ದ ಫ್ರಾನ್ಸಿಸ್ಕೋ ಕಪಾಳಮೋಕ್ಷ ಮಾಡಿದ್ದರು.
ಕಪಾಳಮೋಕ್ಷ ಮಾಡಿದ್ದರ ವಿರುದ್ಧ ಇಂಜಿನಿಯರ್ ಕಪಿಲ್ ನಟೇಕರ್ ಫ್ರಾನ್ಸಿಸ್ಕೋ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಫ್ರಾನ್ಸಿಸ್ಕೋಗೆ ಕೋರ್ಟ್ ಆರು ತಿಂಗಳ ಜೈಲುಶಿಕ್ಷೆ ಹಾಗೂ 1500 ದಂಡ ವಿಧಿಸಿತ್ತು. ನಂತರ ಈ ಪ್ರಕರಣವನ್ನು ಹೈಕೋರ್ಟ್ ಸ್ವಯಂ ಆಗಿ ಕೈಗೆತ್ತಿಕೊಂಡು ಜೈಲುಶಿಕ್ಷೆ ಆದೇಶವನ್ನು ಎತ್ತಿಹಿಡಿದಿತ್ತು.
ಆದರೆ ಪಚಾವೋ ಪ್ರಕರಣದ ಸಂಬಂಧ ತನಗೆ ನ್ಯಾಯ ದೊರಕಿಸಿಕೊಡಿ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೂಡಾ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ಆರು ತಿಂಗಳ ಜೈಲುಶಿಕ್ಷೆಯನ್ನು ಖಾಯಂಗೊಳಿಸಿತ್ತು.