
ನವದೆಹಲಿ: ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜನತೆಗೆ ಇಂಟರ್‌ನೆಟ್ ಬಳಕೆಗೆ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಪ್ರತಿಯೊಬ್ಬರಿಗೂ ನೆಟ್ ಬಳಕಗೆ ಸ್ವಾತಂತ್ರ್ಯವಿರಬೇಕು. ಆದರೆ ಕೇಂದ್ರ ಸರ್ಕಾರ ಕೆಲವು ಉದ್ಯಮಿಗಳ ಒತ್ತಡಕ್ಕೆ ಮಣಿದು ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದಂತೆ ತಟಸ್ಥ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ನೆಟ್ ನ್ಯೂಟ್ರಾಲಿಟಿ ಕುರಿತಂತೆ ಕಾನೂನಿನಲ್ಲಿ ಬದಲಾವಣೆ ಮಾಡಿ, ಹೊಸ ಕಾಯ್ದೆ ತನ್ನಿ ಮತ್ತು ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಟ್ರಾಯ್ ನಿರ್ಧಾರಕ್ಕೆ ತಡೆಯೊಡ್ಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು, ಸರ್ಕಾರದ ಮೇಲೆ ಯಾವುದೇ ಕಾಪೋರೇಟ್ ಸಂಸ್ಥೆಗಳ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ನೆಟ್ ನ್ಯೂಟ್ರಾಲಿಟಿ ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ ಅದು ತುಂಬ ಸೂಕ್ಷ್ಮ ವಿಚಾರವಾಗಿದ್ದು, ನೆಟ್ ನ್ಯೂಟ್ರಾಲಿಟಿ ಕಾಪಾಡುವ ಉದ್ದೇಶದಿಂದ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಯುವಕರು ಇಂಟರ್ನೆಟ್ ಬಳಸುವುದರ ಪರ ಇದ್ದು, ನೆಟ್ ನ್ಯೂಟ್ರಾಲಿಟಿ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೊದಲು ದೂರವಾಣಿ ನಿಯಂತ್ರಣ ಪ್ರಾಧಿಕಾರದ ವರದಿ ಬರಲಿ. ವರದಿಯನ್ನು ಸಮಿತಿ ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತೆ. ಆ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ನೆಟ್ ನ್ಯೂಟ್ರಾಲಿಟಿ(ಅಂತರ್ಜಾಲ ತಟಸ್ಥ ನೀತಿ)
ನೆಟ್ ನ್ಯೂಟ್ರಾಲಿಟಿ ಆಂದೋಲನ ಅಂತರ್ಜಾಲ ಮುಕ್ತ ಬಳಕೆಗೆ ಬೆಂಬಲವಾಗಿರುವಂಥಾದ್ದು. ಇದು ಟೆಲಿಕಾಂ ಕಂಪನಿಗಳಿಗೆ ಗ್ರಾಹಕನ ಅಂತರ್ಜಾಲ ಬಳಕೆಯನ್ನು ನಿಯಂತ್ರಿಸುವುದನ್ನು ವಿರೋಧಿಸುತ್ತದೆ. ಮುಕ್ತ ಮಾಹಿತಿ, ಸಂವಹನ ಇದರ ಮೂಲ ಉದ್ದೇಶ. ಈ ಆಂದೋಲನ ನೀತಿಯಂತೆ ಎಲ್ಲಾ ವೆಬ್‌ಸೈಟ್‌ಗಳು, ಅಂತರ್ಜಾಲ ಮಾಹಿತಿ ವಿನಿಮಯಗಳು ಒಂದೇ ವೇಗದಲ್ಲಿ ಸಾಧ್ಯವಾಗಬೇಕು. ಯಾವುದೋ ಒಂದು ವೆಬ್‌ಸೈಟ್ ಅತಿ ವೇಗದಲ್ಲಿ, ಮತ್ತೂಂದು ತೀರ ನಿಧಾನಕ್ಕೆ ಮಾಡುವಂತಿಲ್ಲ. ಅಲ್ಲದೇ ವಿವಿಧ ಬಳಕೆಯನ್ನು ಮಾನದಂಡವಾಗಿರಿಸಿ ಬೆಲೆಯನ್ನೂ ಸೇವಾ ಕಂಪನಿಗಳು ನಿರ್ಧರಿಸುವಂತಿಲ್ಲ. ಇದು ಮುಕ್ತ ದತ್ತಾಂಶ ಪಡೆವ ಗ್ರಾಹಕನ ಹಕ್ಕಿಗೆ ಬೆಂಬಲವಾಗಿದೆ.
Advertisement