
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ ರ್ಯಾಲಿ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಘಟನೆ ಕುರಿತು ತನಿಖೆಗೆ ಮಾಡುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದೆ.
ಪ್ರಕರಣದ ಕುರಿತು ತನಿಖೆ ನಡೆಸುವಂತೆ ನವದೆಹಲಿ ಜಿಲ್ಲಾ ನ್ಯಾಯಾಧೀಶರನ್ನು ದೆಹಲಿ ಸರ್ಕಾರ ಕೇಳಿಕೊಂಡಿದ್ದು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ದೆಹಲಿ ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರ್ಯಾಲಿ ವೇಳೆ ಜಂತರ್ ಮಂತರ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರಾಜಸ್ಥಾನ ಮೂಲದ ರೈತ ಗಜೇಂದ್ರ ಸಿಂಗ್ ಅವರ ಕುಟುಂಬಕ್ಕೆ ಕೇಜ್ರಿವಾಲ್ ಸಾಂತ್ವಾನ ಹೇಳಿದ್ದು, ಇದೊಂದು ತೀವ್ರ ದುಃಖಕರ ಘಟನೆ. ಅವರ ಸಾವಿನಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಆರೋಪ, ಪ್ರತ್ಯಾರೋಪ ಮಾಡಲು ದೆಹಲಿ ಸರ್ಕಾರ ಬಯಸುವುದಿಲ್ಲ. ಆದರೆ ಸಾರ್ವಜನಿಕವಾಗಿಯೇ ಇಂತಹ ಘಟನೆ ನಡೆಯಲು ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement