ತಾಯಿಯ ದೌರ್ಜನ್ಯ ಸಹಿಸಲಾರದೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹೋದ ಬಾಲಕಿ!

ಪರ ಪುರುಷನೊಂದಿಗೆ ಸಂಬಂಧ ಹೊಂದಿ ಆತನನ್ನು ಅಪ್ಪ ಎಂದು ಕರೆಯುವಂತೆ ಮಗಳಿಗೆ ಹಿಂಸೆ ನೀಡಿದ ತಾಯಿಯ ದೌರ್ಜನ್ಯ ತಾಳಲಾರದೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಬಾಲಕಿಯೊಬ್ಬಳು ದೂರು ನೀಡಿರುವ ಘಟನೆ ಬುಧವಾರ ನಡೆದಿದೆ!...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುಚಿ: ಪರ ಪುರುಷನೊಂದಿಗೆ ಸಂಬಂಧ ಹೊಂದಿ ಆತನನ್ನು ಅಪ್ಪ ಎಂದು ಕರೆಯುವಂತೆ ಮಗಳಿಗೆ ಹಿಂಸೆ ನೀಡಿದ ತಾಯಿಯ ದೌರ್ಜನ್ಯ ತಾಳಲಾರದೆ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಬಾಲಕಿಯೊಬ್ಬಳು ದೂರು ನೀಡಿರುವ ಘಟನೆ ಬುಧವಾರ ನಡೆದಿದೆ!.

ಆನಂದಿ (38) ಎಂಬಾಕೆ ಫಾರ್ಮಸಿಯೊಂದರಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶಂಕರ್ ಬಾಬು (45) ಟೈಲರ್ ಆಗಿದ್ದು, ಕೆಲವು ವರ್ಷಗಳ ಹಿಂದೆ ಈ ಇಬ್ಬರು ವಿವಾಹವಾಗಿದ್ದರು. ವೈವಾಹಿಕ ಜೀವನದಲ್ಲಿ ತೊಡಕು ಉಂಟಾದ ಹಿನ್ನೆಲೆಯಲ್ಲಿ 4 ವರ್ಷಗಳ ಹಿಂದೆ ಇಬ್ಬರೂ ಬೇರೆಯಾಗಿದ್ದರು. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಂದೆ-ತಾಯಿಯ ಪ್ರೀತಿಯೊಂದಿಗೆ ಬದುಕಬೇಕಿದ್ದ ಬಾಲಕಿ, ಈ ಇಬ್ಬರ ಜಗಳದಿಂದಾಗಿ ತಾಯಿಯೊಬ್ಬಳ ಮಡಿಲಿನಲ್ಲಿ ಬೆಳೆಯುವಂತಹ ಪರಿಸ್ಥಿತಿ ಎದುರಾಗಿತ್ತು. ಪತಿಯೊಂದಿಗಿನ ಸಂಬಂಧದಿಂದ ಬೇರಾದ ಆನಂದಿ ದಿನಕಳೆಯುತ್ತಿದ್ದಂತೆ ಪರ ಪುರುಷನೊಡನೆ ಸಂಬಂಧವಿಟ್ಟುಕೊಂಡಿದ್ದಳು.

ಮಗುವನ್ನು ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದ ಆನಂದಿ, ಸಂಬಂಧವಿಟ್ಟುಕೊಂಡಿದ್ದಾತನನ್ನೇ ತಂದೆಯೆಂದು ಕರೆಯುವಂತೆ ಪ್ರತಿನಿತ್ಯ ಮಗುವಿಗೆ ಹೊಡೆದು ಹಿಂಸೆ ನೀಡುತ್ತಿದ್ದಳು. ತಾಯಿಯ ದೌರ್ಜನ್ಯದಿಂದ ಬೇಸತ್ತಿದ್ದ ಮಗು ಮಕ್ಕಳ ಸಹಾಯವಾಣಿ ಕಚೇರಿಗೆ ಹೋಗಿ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾಳೆ.

6ನೇ ತರಗತಿ ಬಾಲಕಿ ಇದ್ದಕ್ಕಿದ್ದಂತೆ ಮಕ್ಕಳ ಸಹಾಯವಾಣಿ ಕಚೇರಿಗೆ ಬಂದು, ತಾಯಿ ತನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದಾಳೆ ಎಂದು ಆಕೆಯ ನೋವನ್ನು ಹಂಚಿಕೊಂಡಳು. ಮಕ್ಕಳ ಸಹಾಯವಾಣಿ ಕುರಿತಂತೆ ನಿನಗೆ ಹೇಗೆ ಗೊತ್ತು ಎಂದು ಕೇಳಿದಾಗ ಮಕ್ಕಳ ಸಹಾಯವಾಣಿ ಕುರಿತಂತೆ ಶಾಲೆಯಲ್ಲಿ ಅರಿವು ಮೂಡಿಸಲು ವಿಶೇಷ ತರಗತಿಯಿದೆ. ಹೀಗಾಗಿ ನನಗೆ ಈ ಗೊತ್ತು ಎಂದು ಹೇಳಿದ್ದಳು ಎಂದು ಮಕ್ಕಳಸಹಾಯವಾಣಿ ಸಂಯೋಜಕ ಅಲ್ಬರ್ಟ್ ಮನೋಹರನ್ ತಿಳಿಸಿದ್ದಾರೆ.

ತಾಯಿಯೊಂದಿಗೆ ಇರಲು ಇಷ್ಟವಿಲ್ಲ ನಾನು ಮನೆಗೆ ಹೋಗುವುದಿಲ್ಲ. ನನಗೆ ನನ್ನ ತಂದೆಯೊಂದಿಗೆ ಇರಲು ಇಷ್ಟ ಎಂದು ಮಗು ಹೇಳಿತ್ತಿತ್ತು. ಹೀಗಾಗಿ ಮಗುವಿನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಯಿತು. ನಂತರ ಸ್ಥಳಕ್ಕೆ ಬಂದ ಮಗುವಿನ ತಾಯಿ ಮಗುವನ್ನು ತಮಗೆ ಹಸ್ತಾಂತರಿಸುವಂತೆ ಕೇಳಿಕೊಂಡರು. ಮಗುವಿನ ಹೇಳಿಕೆ ಈಗಾಗಲೇ ದಾಖಲಿಸಿಕೊಳ್ಳಲಾಗಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಮಗುವನ್ನು ಸರ್ಕಾರಿ ಅವಲೋಕನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com