
ನವದೆಹಲಿ: ಆಮ್ ಆದ್ಮಿ ಪಕ್ಷದ ಪ್ರತಿಭಟನಾ ರ್ಯಾಲಿಯ ವೇಳೆ ರಾಜಸ್ಥಾನ ಮೂಲದ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಕುರಿತು ಅವರ ಮಗಳೊಂದಿಗೆ ಟಿವಿ ಮಾಧ್ಯಮದೊಂದಿಗೆ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ವೇಳೆ ಆಪ್ ನಾಯಕ ಆಶುತೋಷ್ ಅವರು ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟ ಘಟನೆ ನಡೆಯಿತು.
'ನಾನು ತಪ್ಪಿತಸ್ಥ ಮೇಘಾ... ನಿನ್ನ ತಂದೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಎಂದು ಗಜೇಂದ್ರ ಸಿಂಗ್ ಅವರ ಪುತ್ರಿ ಮೇಘಾ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತ ಗೋಳೋ ಎಂದು ಅಶುತೋಷ್ ಬಿಕ್ಕಿ ಬಿಕ್ಕಿ ಅತ್ತರು.
ಇದೇ ವೇಳೆ ದಯಮಿಟ್ಟು ಗಜೇಂದ್ರ ಸಿಂಗ್ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರಲ್ಲಿ ಅಶುತೋಷ್ ಮನವಿ ಮಾಡಿಕೊಂಡರು.
ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆಯಷ್ಟೇ ನನ್ನಿಂದ ತಪ್ಪಾಗಿದೆ. ಸಿಂಗ್ ಆತ್ಮಹತ್ಯೆ ಪ್ರಯತ್ನದ ನಂತರವೂ ಭಾಷಣ ಮುಂದುವರಿಸಿದ್ದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮಾಪಣೆ ಕೋರಿದ ಬೆನ್ನಲ್ಲೇ ಮತ್ತೊಬ್ಬ ಮುಖಂಡ ಅಶುತೋಷ್ ಟಿವಿ ಚಾನೆಲ್ ಚರ್ಚೆಯ ಸಂದರ್ಭದಲ್ಲಿ ಸಿಂಗ್ ಮಗಳ ಜೊತೆ ಮಾತನಾಡುತ್ತ ಕಣ್ಣೀರಿಟ್ಟ ಘಟನೆ ನಡೆದಿದೆ.
Advertisement