ಬೆಂಗಳೂರಿನಿಂದ ನೇಪಾಳಕ್ಕೆ ಪ್ರವಾಸ ಹೋಗಿದ್ದ 85 ಮಂದಿಯ ಸಂಪರ್ಕ ಕಡಿತ
ಬೆಂಗಳೂರು: ನೇಪಾಳದ ಕಠ್ಮಂಡುವಿನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಿಂದಾಗಿ ಬೆಂಗಳೂರಿನಿಂದ ನೇಪಾಳಕ್ಕೆ ಹೋದ ಸುಮಾರು 85 ಕ್ಕೂ ಹೆಚ್ಚು ಮಂದಿ ಸಂಪರ್ಕಕ್ಕೆ ಸಿಗುತ್ತಿಲ್ಲದಿರುವುದಾಗಿ ತಿಳಿದುಬಂದಿದೆ.
ಖಾಸಗಿ ಸಂಸ್ಥೆಗೆ ಸೇರಿದ ಟ್ರಾವೆಲ್ಸ್ ನಲ್ಲಿ 85 ಮಂದಿ ಬೆಂಗಳೂರಿಗರು ನೇಪಾಳ ಪ್ರವಾಸಕ್ಕೆ ಹೋಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಸಂಭವಿಸಿದ ನಂತರ ಗಾಬರಿಗೊಂಡ ಕುಟುಂಬಸ್ಥರು ಪ್ರವಾಸಕ್ಕೆ ಹೋದವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಯಾರೊಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಗಾಬರಿಗೊಂಡಿರುವ ಪ್ರವಾಸಿಗರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಿತೇಶ್ ಕುಮಾರ್ ಅವರು, ನೇಪಾಳಕ್ಕೆ ಹೋದ ಬೆಂಗಳೂರಿಗರ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಕುರಿತಂತೆ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಲಾಗಿದ್ದು, ಬೆಂಗಳೂರಿಗರ ಮಾಹಿತಿಗಾಗಿ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬೆಂಗಳೂರಿಗರ ಮಾಹಿತಿ ಸಿಕ್ಕ ಕೂಡಲೇ ಆನ್ ಲೈನ್ ನಲ್ಲಿ ಮಾಹಿತಿ ನೀಡಲಾಗುವುದು. ಈ ಮೂಲಕ ಕುಟುಂಬಸ್ಥರು ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ನೇಪಾಳ ಭೂಕಂಪದಿಂದಾಗಿ ಕನ್ನಡಿಗರ ರಕ್ಷಣೆಗಾಗಿ ಈಗಾಗಲೇ ಕ್ರಮಕೈಗೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುರ್ತು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1070 ಹಾಗೂ 22340676, 22032582, 22353980 ಸಂಖ್ಯೆಗೆ ಕರೆಮಾಡಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ