ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತದ ಬಾಲಕಿಯರ ಫುಟ್‌ಬಾಲ್ ತಂಡ

ಮಹಾಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಭಾರತದಿಂದ ತೆರಳಿದ್ದ 14 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ತಂಡ ಸಂಕಷ್ಟಕ್ಕೆ ಸಿಲುಕಿದೆ.
ರಕ್ಷಣಾ ಕಾರ್ಯಾಚರಣೆಗೆ ತೆರಳುವ ವಿಮಾನಗಳು
ರಕ್ಷಣಾ ಕಾರ್ಯಾಚರಣೆಗೆ ತೆರಳುವ ವಿಮಾನಗಳು

ನವದೆಹಲಿ: ಮಹಾಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಭಾರತದಿಂದ ತೆರಳಿದ್ದ 14 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ತಂಡ ಸಂಕಷ್ಟಕ್ಕೆ ಸಿಲುಕಿದೆ. 

ಕಠ್ಮಂಡುವಿನ ಹೊರಭಾಗದಲ್ಲಿರುವ ಹೊಟೇಲ್ ವ್ಯೂವ್ ಬಿರ್‌ಕುಟಿ ಎಂಬಲ್ಲಿ ಬಾಲಕಿಯರ ತಂಡ ತಂಗಿದೆ. ಎಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆಂದು ಭಾರತೀಯ ಹೈಕಮಿಷನರ್ ಕಚೇರಿ ಸ್ಪಷ್ಟಪಡಿಸಿದೆ.

ಆದರೆ, ದೂರವಾಣಿ ಸಂಪರ್ಕಕ್ಕೆ ಸಿಗದೆ ಪೋಷಕರು ಆತಂಕ್ಕೀಡಾಗಿದ್ದಾರೆ. ಭಾನುವಾರ ಭಾರತದ ಬಾಲಕಿಯರ ತಂಡ ಅಭ್ಯಾಸ ಪಂದ್ಯದಲ್ಲಿ ಇರಾಕ್ ತಂಡದ ಎದುರು ಆಡಬೇಕಿತ್ತು.
ಆದರೆ, ಭೂಕಂಪನದಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಆಟಗಾರರು ಸುರಕ್ಷಿತವಾಗಿದ್ದಾರೆ, ಪೋಷಕರು ಆಂತಕ ಪಡಬೇಕಿಲ್ಲ.

ಆಟಗಾರರು ಉಳಿದುಕೊಂಡಿರುವ ಹೊಟೇಲ್ ಸುರಕ್ಷಿತವಾಗಿದೆ. ಆದರೆ, ಪರಿಸ್ಥಿತಿ ಮಾತ್ರ ಸರಿಯಿಲ್ಲ ಎಂದು ತರಬೇತುದಾರರಾದ ಮೇಮಲ್ ರಾಖಿ ಕಠ್ಮಂಡುವಿನಿಂದ ಟ್ವಿಟ್ ಮಾಡಿದ್ದಾರೆ. 14 ವರ್ಷದೊಳಗಿನ ಆಟಗಾರರು ಮಾತ್ರ ಇಲ್ಲಿನ ಪರಿಸ್ಥಿತಿ ನೋಡಿ ಭಯಭೀತರಾಗಿದ್ದಾರೆ. ಕಣ್ಣೆದುರೇ ಕಟ್ಟಡಗಳು, ದೇವಸ್ಥಾನಗಳು, ಮಂದಿರಗಳು ಉರುಳಿ ಬಿದ್ದಿವೆ.

ಎಲ್ಲಿ ನೋಡಿದರೂ ಹೆಣದ ರಾಶಿಗಳೇ ಕಾಣುತ್ತಿದ್ದು, ಗಾಯಾಳುಗಳು ರಕ್ಷಣೆಗಾಗಿ ಗೋಗರೆಯುತ್ತಿದ್ದಾರೆ. ಇದನ್ನು ಕಂಡು ಆಟಗಾರರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಹೇಳಿದ್ದಾರೆ. ನಮಗೆ ಹೊಟೇಲ್‌ನಲ್ಲಿ ಉಳಿಯಲು ಭಯ ಉಂಟಾಗಿದ್ದರಿಂದ ಬೀದಿಯಲ್ಲೇ ಉಳಿದುಕೊಂಡಿದ್ದೇವೆ. ಹೊಟೇಲ್‌ನವರು ನಮಗೆ ಯಾವುದೇ ರೀತಿಯ ಸಹಾಯ ನೀಡಲಿಲ್ಲ.

ಇಲ್ಲಿ ಕುಡಿಯುವ ನೀರು, ತಿಂಡಿ, ಊಟ ಏನೂ ಸಿಗುತ್ತಿಲ್ಲ. ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ದೂರವಾಣಿ ಸಂಪರ್ಕ ಕಡಿತಗೊಂಡಿರುವುದರಿಂದ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ವಿಷಾದಿಸಿದ್ದಾರೆ.

ಭಾರತದ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಅವರು ನಮ್ಮನ್ನು ಕಠ್ಮಂಡುವಿನಿಂದ ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಭಾರತದಿಂದ ವಿಮಾನ ಬರುತ್ತಿದ್ದಂತೆ ಸ್ವದೇಶಕ್ಕೆ ಮರಳಲು ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ, ಕಠ್ಮಂಡುವಿನಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com