ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳು ನೇಪಾಳಕ್ಕೆ

ಭೂಕಂಪ ಪೀಡಿತ ನೇಪಾಳದಲ್ಲಿ ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದು, ತುರ್ತು ರಕ್ಷಣೆಗಾಗಿ ಇಬ್ಬರು ಹಿರಿಯ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಪಾಳಕ್ಕೆ ಕಳುಹಿಸಿದೆ.
ರಕ್ಷಣಾ ಕಾರ್ಯ
ರಕ್ಷಣಾ ಕಾರ್ಯ

ಭೂಕಂಪ ಪೀಡಿತ ನೇಪಾಳದಲ್ಲಿ ನೂರಾರು ಕನ್ನಡಿಗರು ಸಿಲುಕಿಕೊಂಡಿದ್ದು, ತುರ್ತು ರಕ್ಷಣೆಗಾಗಿ ಇಬ್ಬರು ಹಿರಿಯ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಪಾಳಕ್ಕೆ ಕಳುಹಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಮಧ್ಯಾಹ್ನ ತುರ್ತುಸಭೆ ನಡೆಸಿದ್ದು, ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಘಟನೆಗೆ ಕಳವಳ ವ್ಯಕ್ತ ಪಡಿಸಿದ ಸಿಎಂ, ರಕ್ಷಣಾ ಕಾರ್ಯದಲ್ಲಿ ಯಾವುದೇ ಚ್ಯುತಿಯಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,  ಕನ್ನಡಿಗ ಪ್ರವಾಸಿಗರ ಕುರಿತು ಮಾಹಿತಿ ರವಾನೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 300 ಪ್ರವಾಸಿಗರ ಮಾಹಿತಿಯನ್ನು ವಿದೇಶಾಂಗ ಇಲಾಖೆಗೆ ಕಳುಹಿಸಲಾಗಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹಾಗೂ ಉತ್ತರ ವಿಭಾಗದ ಐಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡ, ಅಲ್ಲಿಂದ ನೇಪಾಳಕ್ಕೆ  ತೆರಳಿದೆ.  

ಇನ್ನು ನಿತೇಶ್ ಕುಮಾರ್ ಸಿಂಗ್ ನೇತೃತ್ವದ ತಂಡವು ನಿಯಂತ್ರಣ ಕೊಠಡಿಯಲ್ಲಿ  ನೇಪಾಳದಲ್ಲಿರುವ ಕನ್ನಡಿಗರಿಗೆ  ಹಾಗೂ ಇಲ್ಲಿನ ಸಂಬಂಧಿಗಳಿಗೆ  ಸಂಪರ್ಕ ಸಾಧಿಸಲು  ಪ್ರಯತ್ನಿಸುತ್ತಿದೆ.  

ಆರಂಭಿಕ  ಪ್ರಯತ್ನದಲ್ಲಿ  85 ಕನ್ನಡಿಗರು ಸುರಕ್ಷಿತವಾಗಿರುವ ಮಾಹಿತಿ ಅಧಿಕಾರಿಗಳಿಗೆ ತಲುಪಿದ್ದು, ಭಾನುವಾರ ಸಂಜೆಯೊಳಗೆ ಮೊದಲ ತಂಡದ 85 ಜನ ವಾರಣಾಸಿ ತಲುಪಲಿದ್ದಾರೆ. 250 ಕನ್ನಡಿಗರ  ಮಾಹಿತಿ ದೊರೆತಿದ್ದು, ನಿಯಂತ್ರಣ ಕೊಠಡಿ ಮಾಹಿತಿ ಸಂಗ್ರಹಿಸಿದೆ. ಇದಲ್ಲದೇ ಅವರನ್ನು ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದೆ.

ಪರ್ಸನ್ ಫೈಂಡರ್ ಸರ್ವಿಸ್ ಬಿಡುಗಡೆ
ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಕಾಣೆಯಾದವರನ್ನು ಹುಡುಕಲು ಗೂಗಲ್, ಪರ್ಸನ್ ಫೈಂಡರ್ ಸರ್ವೀಸ್ ಅನ್ನು ಬಿಡುಗಡೆ ಮಾಡಿದೆ. ಈ ವೆಬ್ ಸೈಟ್ ನಲ್ಲಿ ಕಾಣೆಯಾದವರ ಹೆಸರನ್ನು ನಮೂದಿಸಿ ಹುಡುಕಬಹುದಾಗಿದೆ. ಯಾರ ಬಗ್ಗೆಯಾದರೂ ಮಾಹಿತಿ ಗೊತ್ತಿದ್ದ ಪಕ್ಷದಲ್ಲಿ ಬಲಗಡೆ ಇರುವ ನೀಲಿ ಬಣ್ಣದ ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮಾಹಿತಿಯನ್ನು ದಾಖಲಿಸಬಹುದು.  ನೀವು ಯಾರನ್ನಾದರೂ ಹುಡುಕುತ್ತಿದ್ದರೇ ಎಡಬದಿಯಲ್ಲಿರುವ ಹಸಿರು ಬಣ್ಣದ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಹೆಸರನ್ನು ನಮೂದಿಸಿ ಸ್ಥಿತಿಯನ್ನು ತಿಳಿಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com