ಮತ್ತೊಂದು ನಿರ್ಭಯಾ ಪ್ರಕರಣ: ವರದಿ ಪಡೆದ ಗೃಹ ಸಚಿವಾಲಯ

13 ವರ್ಷದ ಬಾಲಕಿ ಮೇಲೆ ಪಂಜಾಬ್ ನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ವರದಿಯನ್ನು ಪಂಜಾಬ್ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಗುರುವಾರ ವರದಿ ಸಲ್ಲಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಡ: 13 ವರ್ಷದ ಬಾಲಕಿ ಮೇಲೆ ಪಂಜಾಬ್ ನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ವರದಿಯನ್ನು ಪಂಜಾಬ್ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಗುರುವಾರ ವರದಿ ಸಲ್ಲಿಸಿದೆ.

ವರದಿಯಲ್ಲಿ ಘಟನೆ ವೇಳೆ ಬಸ್ ನಲ್ಲಿದ್ದವರು ಬಾಲಕಿ ಹಾಗೂ ಆಕೆಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ವೇಳೆ ಬಾಲಕಿಯ ತಾಯಿ ವಾಹನ ಚಾಲಕನನ್ನು ವಾಹನ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಮಹಿಳೆಯ ಮಾತನ್ನು ನಿರ್ಲಕ್ಷಿಸಿದ ವಾಹನ ಚಾಲಕನು ಮತ್ತಷ್ಟು ವೇಗವಾಗಿ ವಾಹನ ಚಲಾಯಿಸಿದ್ದಾನೆ. ನಂತರ ವಾಹನ ಚಾಲಕನೂ ಕಾಮುಕರ ಜೊತೆ ಕೈಜೋಡಿಸಿದ್ದಾನೆಂದು ತಿಳಿದ ಬಾಲಕಿಯ ತಾಯಿ ಮಗಳೊಂದಿಗೆ ಬಸ್ ನಿಂದ ಹೊರ ಹಾರಿದ್ದಾಳೆ ಎಂದು ತಿಳಿಸಲಾಗಿದೆ. ವರದಿ ಪರಿಶೀಲಿಸಿರುವ ಕೇಂದ್ರ ಗೃಹ ಸಚಿವಾಲಯವು ಘಟನೆ ಕುರಿತಂತೆ ಆಶ್ಚರ್ಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?


35 ವರ್ಷದ ಮಹಿಳೆ ತನ್ನ ಮಗಳು(13) ಹಾಗೂ (14) ಮಗನೊಂದಿಗೆ ಸಂಬಂಧಿಕರ ಮನೆಗೆ ಹೋಗಲೆಂದು ಸಂಜೆಯ ವೇಳೆ ಬಸ್ ಹತ್ತಿದ್ದಾರೆ. ಬಸ್ ಮೊಗಾ ಸಮೀಪದ ಟೋಲ್ ಪ್ಲಾಜಾ ಬಳಿ ಬರುವಾಗ ಕ್ಲೀನರ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಷಯವನ್ನು ಮಹಿಳೆ ಕಂಡಕ್ಟರ್ ಗೆ ತಿಳಿಸಿದ್ದಾಳೆ. ಆದರೂ ಕಂಡಕ್ಟರ್ ಯಾವುದೇ ಪ್ರತಿಕ್ರಿಯೆ ನೀಡದೆ ಕ್ಲೀನರ್ ಗೆ ಬೆಂಬಲ ನೀಡಿದ್ದಾನೆ.

ಕೂಡಲೇ ಮಹಿಳೆ ಡ್ರೈವರ್ ಗೆ ಬಸ್ ನಿಲ್ಲಿಸುವಂತೆ ಹೇಳಿದ್ದಾಳಾದರೂ ಯಾವುದೇ ಪ್ರತಿಕ್ರಿಯೆ ನೀಡದ ಡ್ರೈವರ್ ಬಸ್ ನ್ನು ಮತ್ತಷ್ಟು ವೇಗವಾಗಿ ಓಡಿಸಿದ್ದಾನೆ. ಇದರಿಂದ ಭಯಭೀತಗೊಂಡ ಮಹಿಳೆ ಮತ್ತು ಆಕೆಯ ಮಗಳು ಬಸ್ ನಿಂದ ಹೊರ ಹಾರಿದ್ದಾರೆ. ಇದನ್ನು ಕಂಡ ಬಸ್ ನ ಕ್ಲೀನರ್, ಡ್ರೈವರ್ ಹಾಗೂ ಕಂಡಕ್ಟರ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರದೂ ಚಿಕಿತ್ಸೆ ಫಲಕಾರಿಯಾಗದೆ ಮಗಳು ಕೊನೆಯುಸಿರೆಳೆದಿದ್ದಾಳೆ. ಪ್ರಸ್ತುತ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿರುವುದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಒಡೆತನದ ಕಂಪನಿಗೆ ಸೇರಿದ ಬಸ್ ನಲ್ಲಿ ಎಂಬುದು ಆಘಾತಕಾರಿ ಸಂಗತಿಯಾಗಿದೆ.

ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ಸಿಂಗ್ ಬಾದಲ್ ಅವರು, ಘಟನೆ ಅನಿರೀಕ್ಷಿತವಾಗಿದ್ದು, ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದಷ್ಟು ಬೇಗ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ವಿರೋಧ ಪಕ್ಷದ ನಾಯಕ ಸುನೀಲ್ ಕುಮಾರ್ ಜಖರ್, ಪಂಜಾಬ್ ನ ಕಾಂಗ್ರೆಸ್ ಮುಖ್ಯಸ್ಥ ಪರ್ತಬ್ ಸಿಂಗ್ ಬಜ್ವಾ ಅವರು ಪ್ರಕಾಶ್ ಸಿಂಗ್ ಬಾದಲ್ ಅವರ ನಿವಾಸದೆದುರು ಪ್ರತಿಭಟನೆ ನಡೆಸುತ್ತಿದ್ದು, ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com