ಮರಣದಂಡನೆ ಚರ್ಚೆ ಸ್ವಾಗತಿಸಿದ ಬಿಜೆಪಿ

ಯಾಕೂಬ್ ಮೆಮನ್ ಗಲ್ಲಿನ ಬೆನ್ನಲ್ಲೇ ಶುರುವಾದ ಮರಣದಂಡನೆಗೆ ಸಂಬಂಧಿಸಿದ ಪರ- ವಿರೋಧದ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಕುರಿತ ಚರ್ಚೆಯ ಭಾಗವಾಗಲು ನಾವೂ ಸಿದ್ಧ ಎಂದು ಬಿಜೆಪಿ ಇದೇ ಮೊದಲ ಬಾರಿಗೆ ಹೇಳಿದೆ...
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

ನವದೆಹಲಿ/ತಿರುವನಂತಪುರಂ: ಯಾಕೂಬ್ ಮೆಮನ್ ಗಲ್ಲಿನ ಬೆನ್ನಲ್ಲೇ ಶುರುವಾದ ಮರಣದಂಡನೆಗೆ ಸಂಬಂಧಿಸಿದ ಪರ- ವಿರೋಧದ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಕುರಿತ ಚರ್ಚೆಯ ಭಾಗವಾಗಲು ನಾವೂ ಸಿದ್ಧ ಎಂದು ಬಿಜೆಪಿ ಇದೇ ಮೊದಲ ಬಾರಿಗೆ ಹೇಳಿದೆ.

``ಮರಣದಂಡನೆಗೆ ಸಂಬಂಧಿಸಿದ ಚರ್ಚೆಯನ್ನು ನಾವು ಸ್ವಾಗತಿಸುತ್ತೇವೆ. ಯಾಕೂಬ್ ಮೆಮನ್‍ನನ್ನು ಕಾನೂನು ಪ್ರಕಾರವೇ ಗಲ್ಲಿಗೇರಿಸಲಾಗಿದೆ. ಇದಕ್ಕೂ ಮರಣದಂಡನೆ ಚರ್ಚೆಗೂ ಸಂಬಂಧವೇ ಇಲ್ಲ'' ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಮರಣದಂಡನೆಗೆ ಸಂಬಂಧಿಸಿ ಬಿಜೆಪಿಯಲ್ಲೂ ಅಪಸ್ವರ ಎದ್ದ ಹಿನ್ನೆಲೆಯಲ್ಲಿ ಸೀತಾರಾಮನ್‍ರಿಂದ ಈ ಅಭಿಪ್ರಾಯ ಹೊರಬಿದ್ದಿದೆ. ಇತ್ತೀಚೆಗಷ್ಟೇ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮರಣದಂಡನೆ ರದ್ದಾಗಬೇಕೆಂದು ಆಗ್ರಹಿಸಿದ್ದರು. ಮುಕ್ತ ಚರ್ಚೆಯಾಗಲಿ: ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಗಲ್ಲು ಬೇಡ ಎಂಬ ಚರ್ಚೆಗೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪ್ರವೇಶಿಸಿದ್ದಾರೆ. ಗಲ್ಲಿಗೆ ಸಂಬಂಧಿಸಿ ಮುಕ್ತ ಚರ್ಚೆಯಾಗಬೇಕೆಂದು ಚಾಂಡಿ ಪ್ರತಿಪಾದಿಸಿದ್ದಾರೆ.

`` ವೈಯಕ್ತಿಕವಾಗಿ ನಾನು ಮರಣದಂಡನೆ ವಿರೋಧಿ. ವ್ಯಕ್ತಿಯೊಬ್ಬನಿಗೆ ಜೀವಮಾನವಿಡೀ ಜೈಲಿನಲ್ಲೇ ಕೊಳೆಯುವಂತೆ ಮಾಡುವುದೇ ದೊಡ್ಡ ಶಿಕ್ಷೆ. ಮರಣದಂಡನೆಗೆ ಸಂಬಂಧಿಸಿ ಮುಕ್ತ ಚರ್ಚೆಯಾಗಬೇಕು'' ಎಂದು ಆಗ್ರಹಿಸಿದ್ದಾರೆ.

ಮರಣದಂಡನೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮುಖಂಡರಾದ ಶಶಿ ತರೂರ್ ಹಾಗೂ ದಿಗ್ವಿಯ್ ಸಿಂಗ್ ಅವರಿಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಮತ್ತೆ ಗಲ್ಲು ವಿಚಾರ ಎತ್ತಿದ ತರೂರ್: ಈ ಹಿಂದೆ ಗಲ್ಲು ನಿಷೇಧಿಸುವ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ಆ ಸಂಬಂಧ ಹೇಳಿಕೆ ನೀಡಿದ್ದಾರೆ. ಗಲ್ಲು ಶಿಕ್ಷೆಯೆಂಬ ಹಳೆಯ ನಿಯಮವನ್ನು ರದ್ದು ಮಾಡಬೇಕು. ಭಯೋತ್ಪಾದಕರಿಗೂ ಗಲ್ಲು ಶಿಕ್ಷೆ ನೀಡಬಾರದು. ಅದರ ಬದಲು ಅವರನ್ನು ಜೀವಮಾನವಿಡೀ ಪರೋಲ್ ನೀಡದೆ ಕಾರಾಗೃಹದಲ್ಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದಿನ ದಿನಗಳಲ್ಲಿ ಕೊಲೆಗಾರನ್ನೆಲ್ಲ ಗಲ್ಲಿಗೇರಿಸಬೇಕೆನ್ನುವ ಭಾವನೆ ಇತ್ತು. ಆ ಹಳೆಯ ಮನಸ್ಥಿತಿಯನ್ನು ನಾವೀಗ ಯಾಕೆ ಪಾಲಿಸಬೇಕು ಎಂದು ತರೂರ್ ಪ್ರಶ್ನಿಸಿದ್ದಾರೆ. ವ್ಯಕ್ತಿಯೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸುವಾಗ ನಾವೂ ಅವರಂತೆಯೇ ವರ್ತಿಸುತ್ತಿದ್ದೇವೆ. ಅವರು ಕೊಲೆಗಡುಕರು, ಸರ್ಕಾರಗಳು ಅವರ ರೀತಿಯೇ ವರ್ತಿಸಬಾರದು ಎಂದು ತರೂರ್ ಹೇಳಿದ್ದಾರೆ. ಇದೇ ವೇಳೆ ಈ ಹಿಂದಿನ ತಮ್ಮ ಟ್ವೀಟ್‍ಗೂ ಅವರು ಸ್ಪಷ್ಟನೆ ನೀಡಿದ್ದಾರೆ.

``ಅದಕ್ಕೂ ಯಾಕೂಬ್‍ಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿರಿಸಿಕೊಂಡು ಆ ಟ್ವೀಟ್ ಮಾಡಿಲ್ಲ. ಮರಣದಂಡನೆ ಅನ್ನುವುದು ಹಳೆಯ ಸಂಪ್ರದಾಯ ಎಂದಷ್ಟೇ ಹೇಳಿದ್ದೆ'' ಎಂದು ತರೂರ್ ಹೇಳಿದ್ದಾರೆ. ಜತೆಗೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರೂ `` ಇನ್ನೊಬ್ಬರ ಜೀವ ತೆಗೆಯುವ ಅಧಿಕಾರ ನಮಗಿಲ್ಲ'' ಎಂದು ಹೇಳಿದ್ದನ್ನು ತರೂರ್ ಸ್ಮರಿಸಿದ್ದಾರೆ.

ತರೂರ್ ಅವರಲ್ಲದೆ ಸೀತಾರಾಂ ಯೆಚೂರಿ, ಡಿ. ರಾಜಾ, ಕನಿಮೋಳಿ, ಶತ್ರುಘ್ನ ಸಿನ್ಹಾ, ವರುಣ್ ಗಾಂಧಿ ಸೇರಿ ಅನೇಕ ರಾಜಕಾರಣಿಗಳು ಹಾಗೂ ಪ್ರಮುಖ ಕಾನೂನು ಪಂಡಿತರು
ಮರಣದಂಡನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com